ಬೆಳಗಾವಿ: ತಾಲೂಕಿನ ಪೀರನವಾಡಿ ಪಟ್ಟಣದಲ್ಲಿ ಮೂರು ವರ್ಷದ ಮಗನಿಗೆ ನೇಣು ಹಾಕಿ ಬಳಿಕ ತಾಯಿಯೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ, ಅತ್ತೆ, ಮೈದುನ, ವಾರಗಿತ್ತಿ ಸೇರಿದಂತೆ ಆರು ಜನರ ವಿರುದ್ಧ ಸೋಮವಾರ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ?: ಅವಿಭಕ್ತ ಕುಟುಂಬದಲ್ಲಿ ಮಾಡಿದ ಸಾಲವನ್ನು ಬೇರೆಯಾದ ಬಳಿಕ ಹಿರಿ ಮಗ ಹಾಗೂ ಆಕೆಯ ಪತ್ನಿಯೇ ತೀರಿಸಬೇಕೆಂದು ಒತ್ತಡ ಹಾಕಿದ್ದರಿಂದ ಮನನೊಂದ ಪ್ರೇಮಾ ನಾಗೇಶ ತಳವಾರ(28) ಭಾನುವಾರ ಮೂರು ವರ್ಷದ ಪುತ್ರ ಭುವನಗೆ ಸೀರೆಯಿಂದ ನೇಣು ಬಿಗಿದು, ಬಳಿಕ ತಾನೂ ನೇಣು ಹಾಕಿಕೊಂಡಿದ್ದಾಳೆ.
ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ನಾಗೇಶ ತಳವಾರ ಜತೆಗೆ ಆರು ವರ್ಷದ ಹಿಂದೆ ಪ್ರೇಮಾಳ ಮದುವೆಯಾಗಿತ್ತು. ನಾಗೇಶ ಮಜಗಾವಿ ಕಾರ್ಖಾನೆಯಲ್ಲಿ ಕಾರ್ಮಿಕನಾಗಿದ್ದಾನೆ. ಇದರಿಂದ ಮಜಗಾವಿಯಲ್ಲಿ ಕುಟುಂಬದ ಸದಸ್ಯರು ಒಂದೇ ಮನೆಯಲ್ಲಿದ್ದರು. ಈ ವೇಳೆ ಕುಟುಂಬದ ಅನುಕೂಲಕ್ಕೆ ವಿವಿಧ ಸಂಘಗಳಲ್ಲಿ 4 ಲಕ್ಷ ರೂ. ಸಾಲ ಮಾಡಲಾಗಿತ್ತು. ಈ ಹಣವನ್ನು ಅತ್ತೆ ಹಾಗೂ ಪತಿಯ ಸಹೋದರನೇ ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿದ್ದರಂತೆ.
ಈ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು. ಇದರಿಂದ ರೋಸಿ ಹೋದ ನಾಗೇಶ ಮತ್ತು ಪ್ರೇಮಾ ಪೀರನವಾಡಿಯಲ್ಲಿ ಬಾಡಿಗೆ ಮನೆಯಲ್ಲಿದ್ದರು. ಆಗಾಗ ಮನೆಗೆ ಬರುತ್ತಿದ್ದ ಅತ್ತೆ, ಮೈದುನ ಹಾಗೂ ವಾರಗಿತ್ತಿಯರು ಸಾಲವನ್ನು ನೀವೇ ತೀರಿಸಬೇಕೆಂದು ಕಿರುಕುಳ ನೀಡುತ್ತಿದ್ದರಂತೆ. ನಾಗೇಶನಿಗೆ ಹತ್ತು ಸಾವಿರ ಸಂಬಳ. ಇಷ್ಟರಲ್ಲಿ ಹೇಗೆ ಸಾಲ ತೀರಿಸಬೇಕೆಂದು ಪ್ರೇಮಾ ಪ್ರಶ್ನಿಸಿದ್ದಾಳೆ. ಇದರಿಂದ ಈಕೆಯ ಚಿನ್ನಾಭರಣ ಕಿತ್ತುಕೊಂಡು ಹಲ್ಲೆ ಮಾಡಿದ್ದಾರೆ.
ಈ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪ್ರೇಮಾಳ ತಾಯಿ ಫಕೀರವ್ವ ಪವಾಡಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾಳೆ. ಘಟನೆಯಿಂದ ಆಕ್ರೋಶಗೊಂಡ ಜನರು ಸೋಮವಾರ ಬೆಳಗ್ಗೆ ಜಿಲ್ಲಾಸ್ಪತ್ರೆ ಆವರಣದ ಶವಾಗಾರದ ಬಳಿ ಅತ್ತೆ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
Laxmi News 24×7