ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ದರೋಡೆ, ಸುಲಿಗೆ, ಸರಗಳ್ಳತನ, ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಸೇರಿ ಹಲವು ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಆತಂಕವಿತ್ತು. ಆದರೆ 2025ರ ಅಂಕಿ-ಅಂಶಗಳನ್ನು 2024ಕ್ಕೆ ಹೋಲಿಸಿದರೆ 2025ರಲ್ಲಿ ಸಾಮಾನ್ಯ ಅಪರಾಧ ಪ್ರಕರಣಗಳು ಹಲವು ಜಿಲ್ಲೆಗಳಲ್ಲಿ ಸರಾಸರಿ ಶೇ.30ರಷ್ಟು ಕಡಿಮೆಯಾಗಿವೆ.
ಬೆಂಗಳೂರು, ಮಂಗಳೂರು, ಮೈಸೂರು ಸೇರಿ ಪ್ರಮುಖ ನಗರ ಪ್ರದೇಶಗಳಲ್ಲೂ ಇದೇ ಪ್ರಮಾಣದಲ್ಲಿ ಅಪರಾಧಗಳ ಸಂಖ್ಯೆ ಇಳಿಕೆ ಕಂಡುಬಂದಿದೆ. ಆದರೆ ಅಪರಾಧ ಪ್ರಮಾಣ ಇಳಿಕೆ ನಿಜವಾಗಿಯೂ ಕಡಿಮೆಯಾದ ಪರಿಣಾಮವೇ, ಅಥವಾ ಪೊಲೀಸರ ಕಾರ್ಯವೈಖರಿಯ ಪರಿಣಾಮವೇ ಎಂಬುದು ಕುತೂಹಲ ಮೂಡಿಸಿದೆ.
ಸಿಸಿ ಕ್ಯಾಮರಾಗಳೇ ದೊಡ್ಡ ಅಸ್ತ್ರ:
ದಶಕದ ಹಿಂದೆ ಅಪರಾಧ ಕೃತ್ಯ ಎಸಗಿ ತಪ್ಪಿಸಿಕೊಳ್ಳುವುದು ತುಸು ಸುಲಭವಾಗಿತ್ತು. ಆದರೆ, ಇಂದು ನಗರ ಪ್ರದೇಶಗಳಲ್ಲಿ ರಸ್ತೆಗಳು, ವಾಣಿಜ್ಯ ಸಂಕೀರ್ಣಗಳು, ಅಪಾರ್ಟ್‌ಮೆಂಟ್‌ಗಳು, ಬ್ಯಾಂಕ್‌ಗಳು, ಅಂಗಡಿ-ಮುಂಗಟ್ಟುಗಳು ಹಾಗೂ ಸಾರ್ವಜನಿಕರ ಮನೆಗಳ ಮುಂದೆ ಅಳವಡಿಸಲಾಗಿರುವ ಸಾವಿರಾರು ಸಿಸಿ ಕ್ಯಾಮರಾಗಳು ಅಪರಾಧಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ.
ಅಪರಾಧ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಸಂಚಾರ ಮಾರ್ಗ, ವಾಹನ, ಮುಖಚಹರೆ ಹಾಗೂ ಚಲನವಲನವನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗುತ್ತಿದೆ. ಈ ಕಾರಣದಿಂದಲೇ ಅನೇಕ ಕಳ್ಳತನ ಹಾಗೂ ಸರಗಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಶೀಘ್ರವೇ ಬಂಧನಕ್ಕೊಳಗಾಗುತ್ತಿದ್ದಾರೆ.
ತಂತ್ರಜ್ಞಾನ ಆಧಾರಿತ ತನಿಖೆ:
ಮೊಬೈಲ್ ಕರೆ ವಿವರಗಳು, ಸಿಸಿಟಿಎನ್‌ಎಸ್, ಡಿಜಿಟಲ್ ಸಾಕ್ಷ್ಯಗಳು, ಎಲೆಕ್ಟ್ರಾನಿಕ್ ಕಣ್ಗಾವಲು, ವಾಹನಗಳ ನೋಂದಣಿ ಮಾಹಿತಿ, ಾರೆನಿಕ್ಸ್ ವಿಶ್ಲೇಷಣೆ ಸೇರಿ ವಿವಿಧ ತಂತ್ರಜ್ಞಾನಗಳನ್ನು ತನಿಖೆಯಲ್ಲಿ ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ಇದರ ಪರಿಣಾಮ ಆರೋಪಿಗಳನ್ನು ಗುರುತಿಸುವುದು ಮತ್ತು ಬಂಧಿಸುವುದು ವೇಗಗೊಂಡಿದೆ.
ತನಿಖಾಧಿಕಾರಿಗಳಿಗೆ ಹೆಚ್ಚಿದ ಸಮಯ:
ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ತನಿಖಾಧಿಕಾರಿಗಳಿಗೆ ಬಾಕಿ ಉಳಿದಿರುವ ಹಳೆಯ ಪ್ರಕರಣಗಳನ್ನು ವಿಲೇವಾರಿ ಮಾಡಲು ಹೆಚ್ಚು ಸಮಯ ಸಿಗುತ್ತಿದೆ. ಚಾರ್ಜ್‌ಶೀಟ್ ಸಲ್ಲಿಕೆ, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನ, ರೌಡಿಶೀಟರ್‌ಗಳ ಮೇಲಿನ ನಿಗಾ ಹಾಗೂ ನ್ಯಾಯಾಲಯದಲ್ಲಿ ಪ್ರಕರಣಗಳ ಪರಿಣಾಮಕಾರಿ ನಿರ್ವಹಣೆಗೆ ಆದ್ಯತೆ ನೀಡಲಾಗುತ್ತಿದೆ.
ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾದರೂ, ಅದರ ಹಿಂದಿನ ಎಲ್ಲ ಕಾರಣಗಳನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ. ಎಲ್ಲ ಅಪರಾಧಗಳು ಪೊಲೀಸರ ಗಮನಕ್ಕೆ ಬರುತ್ತಿವೆಯೇ? ದೂರು ದಾಖಲಿಸುವ ಪ್ರಮಾಣದಲ್ಲಿ ಏನಾದರೂ ಬದಲಾವಣೆ ಆಗಿದೆಯೇ? ಕೆಲವು ಪ್ರಕರಣಗಳಲ್ಲಿ ರಾಜಿ ಅಥವಾ ದೂರು ಹಿಂಪಡೆಯುವ ಪ್ರವೃತ್ತಿ ಹೆಚ್ಚಿದೆಯೇ? ಇಂತಹ ಪ್ರಶ್ನೆಗಳೂ ಸಾರ್ವಜನಿಕರಲ್ಲಿ ಮೂಡುತ್ತಿವೆ.
ಅಪರಾಧ ತಡೆಗೆ ಸಿಸಿ ಕ್ಯಾಮೆರಾ, ತಂತ್ರಜ್ಞಾನ ಮತ್ತು ಪೊಲೀಸ್ ಕಾರ್ಯಾಚರಣೆಗಳು ಪ್ರಮುಖ ಪಾತ್ರ ವಹಿಸುತ್ತಿರುವುದು ನಿಜ. ಆದರೆ ಸಾರ್ವಜನಿಕರು ನಿರ್ಭಯವಾಗಿ ದೂರು ದಾಖಲಿಸುವ ವಾತಾವರಣ, ತ್ವರಿತ ತನಿಖೆ, ಶಿಕ್ಷೆಯ ಪ್ರಮಾಣ ಹೆಚ್ಚಳ ಮತ್ತು ಸಮಾಜದ ಸಹಭಾಗಿತ್ವವೂ ದೀರ್ಘಾವಧಿಯಲ್ಲಿ ಅಪರಾಧ ನಿಯಂತ್ರಣಕ್ಕೆ ಅಷ್ಟೇ ಮುಖ್ಯವಾಗಿದೆ.
ನಾಕಾಬಂದಿ ಮತ್ತು ಗಡಿ ಕಣ್ಗಾವಲು ಪರಿಣಾಮ:
ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಅಂತಾರಾಜ್ಯ ಗಡಿ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ನಾಕಾಬಂದಿ ಹೆಚ್ಚಿಸಿದೆ. ರಾತ್ರಿ ಗಸ್ತು, ವಾಹನ ತಪಾಸಣೆ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದೆ. ಅಪರಾಧ ಕೃತ್ಯ ಎಸಗಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಅಥವಾ ನೆರೆಯ ರಾಜ್ಯಗಳಿಗೆ ಪರಾರಿಯಾಗುವುದು ಹಿಂದೆ ಇದ್ದಷ್ಟು ಸುಲಭವಾಗಿಲ್ಲ ಎಂದು ಅಧಿಕಾರಿಗಳ ಅಭಿಪ್ರಾಯವಾಗಿದೆ.