ಹೆಸ್ಕಾಂ ನಿರ್ಲಕ್ಷ್ಯಕ್ಕೆ ಕಂಗಾಲಾದ ಬಾದಾಮಿ ರೈತರು: ವಾರವಾದರೂ ಮುಗಿಯದ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ!
• ಬಾಗಲಕೋಟೆಯಲ್ಲಿ ಹೆಸ್ಕಾಂ ಅಧಿಕಾರಿಗಳ ಭಾರೀ ನಿರ್ಲಕ್ಷ್ಯ!
• ವಾರವಾದರೂ ಸರಿಯಾಗದ ಬಿದ್ದ ವಿದ್ಯುತ್ ಕಂಬಗಳು!
• ನೀರಿಲ್ಲದೆ ಕರಗುತ್ತಿದೆ ರೈತರ ಕಬ್ಬಿನ ಬೆಳೆ!
• ಹಲಕುರ್ಕಿ ಗ್ರಾಮಸ್ಥರ ಆಕ್ರೋಶ, ಕೂಡಲೇ ಸರಿಪಡಿಸಿ!
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿಯಲ್ಲಿ ಹೆಸ್ಕಾಂ ಅಧಿಕಾರಿಗಳ ಅಟ್ಟಹಾಸ ಮತ್ತು ಬೇಜವಾಬ್ದಾರಿತನ ಮುಗಿಲು ಮುಟ್ಟಿದೆ. ಭಾರೀ ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿ ವಾರ ಕಳೆದರೂ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದರಿಂದಾಗಿ ಇಡೀ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ರೈತರು ಮತ್ತು ಜಾನುವಾರುಗಳು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ವಾರದ ಹಿಂದೆ ಸುರಿದ ಭಾರೀ ಮಳೆಗೆ 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.
ಕಂಬಗಳು ಬಿದ್ದ ತಕ್ಷಣವೇ ಗ್ರಾಮಸ್ಥರು ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಈ ಉದಾಸೀನತೆಯಿಂದಾಗಿ ಕಳೆದೊಂದು ವಾರದಿಂದ ಜಮೀನುಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮಗಾಗುತ್ತಿರುವ ತೊಂದರೆಯನ್ನು ಅಧಿಕಾರಿಗಳ ಮುಂದೆ ತೋಡಿಕೊಂಡರೂ ಯಾವುದೇ ಪರಿಹಾರ ಸಿಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ವಿದ್ಯುತ್ ಇಲ್ಲದೆ ಪಂಪ್ಸೆಟ್ಗಳು ಸ್ಥಗಿತಗೊಂಡಿರುವುದರಿಂದ, ಕೈಗೆ ಬಂದ ಕಬ್ಬಿನ ಬೆಳೆ ನೀರಿಲ್ಲದೇ ಒಣಗಲಾರಂಭಿಸಿದೆ. ಜಮೀನಿನಲ್ಲೇ ಮನೆ ಮಾಡಿಕೊಂಡಿರುವ ನೂರಾರು ಕುಟುಂಬಗಳಿಗೆ ಕುಡಿಯುವ ನೀರಿಗೂ ಗತಿಯಿಲ್ಲದಂತಾಗಿದೆ. ಕೇವಲ ಮನುಷ್ಯರಷ್ಟೇ ಅಲ್ಲದೆ, ಜಾನುವಾರುಗಳೂ ಕೂಡ ಹನಿ ನೀರಿಗಾಗಿ ತತ್ವಾರ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. “ಅಧಿಕಾರಿಗಳ ನಿರ್ಲಕ್ಷ್ಯ ನಮ್ಮ ಬದುಕನ್ನು ಬೀದಿಗೆ ತಂದಿದೆ” ಎಂದು ಆಕ್ರೋಶ ಹೊರಹಾಕಿರುವ ಹಲಕುರ್ಕಿ ಗ್ರಾಮಸ್ಥರು, ಕೂಡಲೇ ಬಿದ್ದಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಿ ಜಮೀನುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಪಟ್ಟು ಹಿಡಿದಿದ್ದಾರೆ
Laxmi News 24×7