ದಾವಣಗೆರೆ: ಇಲ್ಲಿನ ದಕ್ಷಿಣ ಕ್ಷೇತ್ರದ ಉಪಚುನಾವಣಾ ಕಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಪ್ರಚಾರ ಅಬ್ಬರದಿಂದ ಸಾಗಿದೆ. ʻಕೈʼ ಕೋಟೆಯನ್ನು ಉಳಿಸಿಕೊಳ್ಳಲು ಸ್ವತಃ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅಖಾಡಕ್ಕಿಳಿದಿದ್ದರೆ, ಇತ್ತ ಕಮಲ ಅರಳಿಸಲೇಬೇಕು ಎಂದು ಕೇಸರಿ ಪಡೆ ಪಣ ತೊಟ್ಟಿದೆ. ಬಿಜೆಪಿ ಘಟಾನುಘಟಿ ನಾಯಕರುಗಳು ಸಹ ಬೀದಿಗಿಳಿದು ಮತಬೇಟೆ ನಡೆಸುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಪರ ಮತಬೇಟೆಗೆ ಕೇಸರಿ ಪಡೆಯ ಘಟಾನಘಟಿ ನಾಯಕರು ಇಳಿದಿದ್ದು, ಮಾಜಿ ಸಚಿವ ಶ್ರೀರಾಮಲು, ಮಾಜಿ ಸಿಎಂ ಸದಾನಂದಗೌಡ, ಸಿ.ಟಿ ರವಿ ಸೇರಿದಂತೆ ಹಲವು ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ಇಡೀ ಕ್ಷೇತ್ರವನ್ನು ಒಂದು ಸುತ್ತು ಪ್ರಚಾರ ಮಾಡಿದ ಕೇಸರಿ ನಾಯಕರು, ಮತಬ್ಯಾಂಕ್ ಕಡೆ ಗಮನ ಹರಿಸುತ್ತಿದ್ದಾರೆ. ಅದರಲ್ಲೂ ಅಹಿಂದ ಮತಗಳ ಜೊತೆ ಲಿಂಗಾಯತ ಮತಗಳು ಛಿದ್ರವಾದಂತೆ ಹಿಡಿದಿಟ್ಟುಕೊಳ್ಳಲು ಲೆಕ್ಕಚಾರ ನಡೆಸುತ್ತಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿ, ಕುಟುಂಬ ರಾಜಕಾರಣದ ಅಸ್ತ್ರ ಇಟ್ಟುಕೊಂಡ ಬಿಜೆಪಿ ಪ್ರಚಾರದಲ್ಲಿ ತೊಡಗಿದೆ. ಇಡೀ ದಿನ ಕಾದರೂ ಸಿಗದ ಜನಪ್ರತಿನಿಧಿಗಳಿಗಿಂತ ಯಾವಾಗಲೂ ಜನರ ಜೊತೆ ಇರುವ ಜನಪ್ರತಿನಿಧಿಯನ್ನು ಗೆಲ್ಲಿಸಿ ಎನ್ನುವ ಮೂಲಕ ಸಚಿವ ಮಲ್ಲಿಕಾರ್ಜುನ್ ಹಾಗೂ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ವಿರುದ್ಧ ಕೇಸರಿ ನಾಯಕರು ವಾಗ್ದಾಳಿ ನಡೆಸುತ್ತಾ ಪ್ರಚಾರ ನಡೆಸುತ್ತಿದ್ದಾರೆ.
ಕಾಂಗ್ರೆಸ್ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಸಿಎಂ ಹಾಗೂ ಡಿಸಿಎಂ ಡಿಕೆಶಿ ಪ್ರಚಾರಕ್ಕೆ ಇಳಿದಿದ್ದು, ನಿನ್ನೆ (ಏ.1) ಗ್ರಾಮಾಂತರ ಭಾಗದಲ್ಲಿ ಪ್ರಚಾರ ಮಾಡಿದ್ರೆ, ಇಂದು ನಗರ ಪ್ರದೇಶಗಳಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ. ನಗರದ ಬಂಬೂ ಬಜಾರ್‌ನಿಂದ ಶುರುವಾದ ರೋಡ್ ಶೋ ಹೊಂಡಾ ಸರ್ಕಲ್, ಹಗೆದಿಬ್ಬ ಸರ್ಕಲ್, ಅಜಾದ್ ನಗರ, ಬಾಷಾ ನಗರ ಸೇರಿದಂತೆ ಹಲವು ಕಡೆ ರೋಡ್ ಶೋ ನಡೆಯಿತು. ಬಳಿಕ ಅಖ್ತರ್ ರಾಜಾ ಸರ್ಕಲ್‌ನಲ್ಲಿಯೂ ಬಹಿರಂಗ ಪ್ರಚಾರ ನಡೆಸಲಾಗಿದೆ. ಈ ಬಾರಿ ಕಾಂಗ್ರೆಸ್ ಮೇಲೆ ಮುಸ್ಲಿಂ ಸಮುದಾಯ ಅಸಮಾಧಾನಗೊಂಡಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಿಎಂ ಕೆಲಸ ಮಾಡುತ್ತಿದ್ದಾರೆ.
Laxmi News 24×7