ಅಥಣಿ: ಇಷ್ಟಲಿಂಗ ಪೂಜೆಯಿಂದ ಸಂಕಷ್ಟ ದೂರವಾಗುತ್ತವೆ. ಮಾನಸಿಕ ನೆಮ್ಮದಿ, ಶಾಂತಿ, ಸಮಾಧಾನ ಲಭಿಸಲು ನಿತ್ಯ ಲಿಂಗಪೂಜೆ ರೂಢಿಸಿಕೊಳ್ಳಬೇಕೆಂದು ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಇಲ್ಲಿನ ಗಚ್ಚಿನಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಸಹಜ ಶಿವಯೋಗ ಕಾರ್ಯಕ್ರಮದಲ್ಲಿ ಮಾತನಾಡಿ, ಭಕ್ತಿಭಾವದಿಂದ ಶಿವನನ್ನು ಆರಾಽಸಬೇಕು. ದಿನಕ್ಕೆ ಸೀಮಿತಗೊಳಿಸದೆ ನಿತ್ಯವೂ ಶಿವರಾತ್ರಿಯಾಗಬೇಕು. ಗಚ್ಚಿನಮಠದ ಶಿವರಾತ್ರಿ ಉತ್ಸವ ಮಾದರಿಯಾಗಿದೆ ಎಂದರು.
ನಾವದಗಿಯ ರಾಜಗುರು ರಾಜೇಂದ್ರ ಒಡೆಯರ ಶಿವಾಚಾರ್ಯರು ಮಾತನಾಡಿ, ಪ್ರತಿಯೊಬ್ಬರೂ ಲಿಂಗಧಾರಿಗಳಾಗಿ ಇಷ್ಟಲಿಂಗ ಪೂಜೆಯೊಂದಿಗೆ ಕಾಯಕದಲ್ಲಿ ನಿರತರಾಗಬೇಕು ಎಂದರು.
ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಶಿವಯೋಗ ಸಾಧನೆಗೆ ಇಷ್ಟಲಿಂಗ ಪೂಜೆ ಉತ್ತಮ ಮಾರ್ಗವಾಗಿದೆ. ಲಿಂಗಪೂಜೆ ಮಹತ್ವ ಅರಿತು ಸುಂದರ ಬದುಕು ರೂಪಿಸಿಕೊಳ್ಳಬೇಕು. ಉಪಾಸಣೆ ಮಾತ್ರವಲ್ಲದೆ ದೇವರ ಧ್ಯಾನ, ಭಜನೆ, ಸಂಗೀತ ಆಲಿಸಬೇಕು ಇದರಿಂದ ನೆಮ್ಮದಿ ಹೊಂದಲು ಸಾಧ್ಯ ಎಂದರು.
ಪಲ್ಲಕ್ಕಿ ಉತ್ಸವ: ಶಿವರಾತ್ರಿ ಶಿವಯೋಗದ ನಿಮಿತ್ತ ಮುರುಘೇಂದ್ರ ಶಿವಯೋಗಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ವಚನಾಭಿಷೇಕ ಜರುಗಿತು. ಬಸವತತ್ತ್ವ ಧ್ವಜಾರೋಹಣ ಬಳಿಕ ಸಕಲ ವಾದ್ಯಮೇಳಗಳೊಂದಿಗೆ ಬಸವಣ್ಣವರ ವಚನಗ್ರಂಥ ಮತ್ತು ಶಿವಯೋಗಿಗಳ ಭಾವಚಿತ್ರದ ಪಲ್ಲಕ್ಕಿ ಉತ್ಸವ ಜರುಗಿತು.
ಗಡಹಿಂಗ್ಲಜ್ ಜಡಿದ್ಧೇಶ್ವರಮಠದ ಮಹಾಂತ ಸ್ವಾಮೀಜಿ, ಶಿಗ್ಗಾವಿಯ ಸಂಗನಬಸವ ಸ್ವಾಮೀಜಿ, ವೀರನಗೌಡ ಜಂಗಮಶೆಟ್ಟಿ, ಈಶ್ವರ ಸಾನಿಕೊಪ್ಪ, ಬಸಲಿಂಗಯ್ಯ ಕಾಜಿಬೀಳಗಿ, ಸುರೇಶ ಪಾಟೀಲ, ಚಂದ್ರಶೇಖರ ಯಲ್ಲಟ್ಟಿ, ಶಕುಂತಲಾ ಬಂಗಿ, ಶಿವಾನಂದ ದಿವಾನಮಳ, ಹನುಮಂತ ಕಾಲುವೆ, ಶ್ರೀಶೈಲ ಹಳ್ಳದಮಳ, ಆನಂದ ಲಗಳಿ, ಗಿರೀಶ ದಿವಾನಮಳ, ನಿತ್ಯಾನಂದ ಚರಂತಿಮಠ, ಮುರುಗೇಶ ಬಾನಿ ಇತರರಿದ್ದರು.
Laxmi News 24×7