ಮೈಸೂರು : ನಾಳೆ ಬಂದರೆ, ಮಾಜಿ ಸಿಎಂ ದಿವಂಗತ ದೇವರಾಜ್ ಅರಸ್ ಅವರ ಮುಖ್ಯಮಂತ್ರಿಯ ಸುದೀರ್ಘ ಅವಧಿಯ ದಾಖಲೆ ಮುರಿಯುವ ಕೆಲಸ ಆಗಲಿದೆ. ಜನರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಅರಸು ಅವರು ಮೈಸೂರಿನವರು. ನಾನೂ ಮೈಸೂರಿನವನೇ ಆಗಿರುವುದು ಸಂತೋಷದ ಸಂಗತಿ. ತಾಲೂಕು ಬೋರ್ಡ್ ಸದಸ್ಯನಾದ ನಂತರದ ನನ್ನ ರಾಜಕೀಯ ಜೀವನದಲ್ಲಿ ಸಚಿವನಾಗುವ ಮತ್ತು ಮುಖ್ಯಮಂತ್ರಿಯಾಗುವ ನಿರೀಕ್ಷೆಯೇ ಇರಲಿಲ್ಲ. ಎಂಎಲ್ಎ ಆಗಬೇಕು ಎಂದು ಒಂದು ಸಾರಿ ಅಂದುಕೊಂಡಿದ್ದೆ. ಈಗ ಎಂಟು ಚುನಾವಣೆಗಳನ್ನು ಗೆದ್ದಿದ್ದೇನೆ’ ಎಂದಿದ್ದಾರೆ.
ನೀವು ಹಾಗೂ ದೇವರಾಜ್ ಅರಸ್ ಅವರು ತಳಸಮುದಾಯದವರು. ಈ ವ್ಯವಸ್ಥೆಯಲ್ಲಿ ಈ ಲೆವೆಲ್ಗೆ ಹೋಗುವುದು ದೊಡ್ಡ ಸಾಧನೆ ಅಲ್ಲವೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ದೇವರಾಜ ಅರಸು ಅವರು ಸಾಮಾಜಿಕವಾಗಿ ಹಿಂದುಳಿದವರಲ್ಲ. ಸಾಮಾಜಿಕವಾಗಿ ಮುಂದುವರೆದವರು ಅವರು. ಕಡಿಮೆ ಜನಸಂಖ್ಯೆಯ ಜನಪ್ರಿಯ ನಾಯಕರಾಗಿದ್ದರು. ನನಗೂ ಅವರಿಗೂ ಹೋಲಿಕೆ ಇಲ್ಲ. ಸನ್ನಿವೇಶ ಬಂತು ನಾನು ದೀರ್ಘಕಾಲ ಮುಖ್ಯಮಂತ್ರಿಯಾಗಿದ್ದೇನೆ. ಜನರ ಆರ್ಶೀವಾದದಿಂದ ಇಲ್ಲಿಯವರೆಗೂ ಬಂದಿದ್ದೇನೆ’ ಎಂದು ಹೇಳಿದ್ದಾರೆ.
‘ಅರಸು ಅವರ ಅವಧಿಯಲ್ಲಿ ರಾಜ್ಯದ ಪರಿಸ್ಥಿತಿ ವಿಭಿನ್ನವಾಗಿತ್ತು. ಅವರು ಒಂದು ಬಾರಿ ಚುನಾವಣೆಯನ್ನು ಸರ್ವಾನುಮತದಿಂದಲೂ ಆಯ್ಕೆಯಾಗಿದ್ದರು. ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ. ಪ್ರಸ್ತುತ ನಾನು ಪೂರೈಸಲಿರುವ ಅವಧಿಯನ್ನು ಮೀರಲಿರುವ ಮತ್ತೊಬ್ಬ ನಾಯಕರೂ ಬರಬಹುದು. ನನಗಿಂತ ಹೆಚ್ಚಿನ ಬಾರಿ ಬಜೆಟ್ ಮಂಡಿಸುವ ನಾಯಕರೂ ಮುಂದೆ ಬರಬಹುದು. ಸಾಧನಾ ಸಮಾವೇಶ ಆಯೋಜಿಸುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ’ ಎಂದಿದ್ದಾರೆ.
Laxmi News 24×7