ಇದು ಸರಕಾರವೋ ಅಥವಾ ಸಾರ್ವಜನಿಕ ಆಸ್ತಿಯ ದಲ್ಲಾಳಿಯೋ?
“ಬಡವನ ಆಸ್ತಿ ನುಂಗುವವನೇ ನಾಯಕ, ನ್ಯಾಯ ಕೇಳುವವನೇ ದೇಶದ್ರೋಹಿ!” – ಇದೇನಾ ನವ ಭಾರತದ ಪರಿಕಲ್ಪನೆ?
ವಿಜಾಪುರದ ಬಿಸಿಲ ನಾಡಿನಲ್ಲಿ ಬಡವರ ಪಾಲಿಗೆ ಆಸರೆಯಾಗಿದ್ದ ೧೫೦ ಎಕರೆ ವಿಸ್ತೀರ್ಣದ ಸರಕಾರಿ ಆಸ್ಪತ್ರೆಯ ಜಮೀನು ಇಂದು ರಾಜಕಾರಣಿಗಳ ಮತ್ತು ಭೂಮಾಫಿಯಾದ ಕೆಟ್ಟ ಕಣ್ಣಿಗೆ ಬಿದ್ದಿದೆ. ಬ್ರಿಟಿಷರ ಕಾಲದ ಮಹಾತ್ಮರು ಬಡವರಿಗಾಗಿ ದಾನ ನೀಡಿದ ಈ ‘ಬಂಗಾರದ ಭೂಮಿ’ಯನ್ನು ‘ಪಿಪಿಪಿ’ (PPP) ಎಂಬ ಮುಸುಕಿನಡಿ ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿರುವ ಸರಕಾರದ ನಿರ್ಧಾರ ಅಕ್ಷರಶಃ ಜನದ್ರೋಹಿಯಾಗಿದೆ.
ತುಘಲಕ್ ದರ್ಬಾರಿನ ಅಟ್ಟಹಾಸ!
ಸಾರ್ವಜನಿಕ ಆಸ್ತಿಯನ್ನು ರಕ್ಷಿಸಿ ಎಂದು ಶಾಂತಿಯುತವಾಗಿ ಧರಣಿ ಕುಳಿತ ನಾಗರಿಕರನ್ನು ಒದ್ದು ಜೈಲಿಗೆ ಹಾಕುವ ವಿಜಾಪುರ ಪೊಲೀಸರ ಕ್ರಮ ತುಘಲಕ್ ಆಡಳಿತವನ್ನು ನೆನಪಿಸುತ್ತಿದೆ.
ಅನ್ಯಾಯದ ಪರಮಾವಧಿ: ಬ್ಯಾಂಕುಗಳನ್ನು ಲೂಟಿ ಹೊಡೆದವನಿಗೆ ಕೆಂಪು ಹಾಸಿನ ಸ್ವಾಗತ. ಕ್ರಿಕೆಟ್ ಬ್ಯಾಟು ಬೀಸಿದವನಿಗೆ ಭಾರತ ರತ್ನ. ಭೃಷ್ಟಾಚಾರಿಗೆ ಮಂತ್ರಿಯ ಸ್ಥಾನಮಾನ. ಭೂಮಾಫಿಯಾಗಳಿಗೆ ‘ಉದ್ಯಮಿ’ ಎಂಬ ಪಟ್ಟ. ಅವನಿಗೆ ಬಡ ರೈತನ ಭೂಮಿ,ಬಡ್ಡಿರಹಿತ ಸಾಲ, ಮೇಲಾಗಿ ಕರ ವಿನಾಯತಿ.
ಆದರೆ ಬಡವನಿಗೆ ಆರೋಗ್ಯವೂ ಬೇಡವೆ? ಅವನಿಗೆ ಉಸಿರಾಡವ ಹಕ್ಕಿಲ್ಲವೆ? ಅವನ ಆರೋಗ್ಯವನ್ನು ಕಿತ್ತುಕೊಂಡರೆ ಉಸಿರನ್ನು ಕಿತ್ತುಕೊಂಡಂತೆ ಅಲ್ಲವೆ? ಅದನ್ನು ಕಿತ್ತುಕೊಳ್ಳುವಿರಾ?
ಸಾರ್ವಜನಿಕ ಸರಕಾರದ ಆಸ್ತಿಯನ್ನು ಉಳಿಸಿ ಎಂದು ನೂರಾರು ದಿನಗಳಿಂದ ಹೋರಾಡುವ ಹೋರಾಟಗಾರನಿಗೆ
ಜೈಲು ಶಿಕ್ಷೆ!
ಇದೆಂತಹ ನ್ಯಾಯ?
ಬಂಗಾರದ ಭೂಮಿ ಹೊಡೆಯುವ ಹುನ್ನಾರ; ನಗರದ ಮಧ್ಯಭಾಗದಲ್ಲಿರುವ ಸುಮಾರು ೬೫ ಲಕ್ಷ ಚದರ ಅಡಿ ಜಾಗದ ಬೆಲೆ ಇಂದು ಅಂದಾಜು ೩೨೦೦ ಕೋಟಿ ರೂಪಾಯಿಗಳಿಗೂ ಹೆಚ್ಚು! ಇಷ್ಟು ದೊಡ್ಡ ಮೊತ್ತದ ಸಾರ್ವಜನಿಕ ಆಸ್ತಿಯನ್ನು ಖಾಸಗಿಯವರ ಜೇಬಿಗೆ ತುರುಕಲು ಸಂಚು ರೂಪಿಸಿರುವ ಜನಪ್ರೀಯ ಜನಪ್ರತಿನಿಧಿಗಳಿಗೆ ಕಣ್ಣಿಲ್ಲವೆ? ಕಿವಿಯಿಲ್ಲವೆ?
ಇದು ಬಡವರ ಆರೋಗ್ಯದ ಮೇಲಿನ ಸರ್ಜಿಕಲ್ ಸ್ಟ್ರೈಕ್!; ಈ ಆಸ್ಪತ್ರೆಯಲ್ಲಿ ಕೇವಲ ೧೫೦ ಎಕರೆ ಜಮೀನಿಲ್ಲ; ಅಲ್ಲಿವೆ ಸಾವಿರ ಹಾಸಿಗೆಗಳು.ಅಲ್ಲಿವೆ ಆಧುನಿಕ ಕ್ಯಾನ್ಸರ್ ಮತ್ತು ಹೃದಯ ಚಿಕಿತ್ಸಾ ಘಟಕಗಳು, ಅಲ್ಲಿದ್ದಾರೆ ನುರಿತ ವೈದ್ಯರು. ಇವೆಲ್ಲವೂ ಪಿಪಿಪಿ ಮಾದರಿಯ ಮೊಸದ ಹೆಸರಿನಲ್ಲಿ ಖಾಸಗಿಯವರ ಪಾಲಾದರೆ, ವಿಜಾಪುರದ ಬಡವ ತನ್ನ ಚಿಕಿತ್ಸೆಗಾಗಿ ಎಲ್ಲಿಗೆ ಹೋಗಬೇಕು?ಖಾಸಗೀಕರಣ ಎಂದರೆ ಸುಲಿಗೆ, ಸರಕಾರಿ ಆಸ್ಪತ್ರೆಯನ್ನು
ಖಾಸಗೀಕರಣಗೊಳಿಸುವುದೆಂದರೆ ಬಡವನಿಗೆ ಮರಣಶಾಸನ ಬರೆದಂತೆ. ಈಗಾಗಲೇ ನಗರದಲ್ಲಿ ಎರಡು ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ಅಲ್ಲಿ ಬಡವ ಪ್ರೀಯಾಗಿ ಚಿಕಿತ್ಸೆ ಪಡೆಯತ್ತಿರುವನೆ? ಬಡ ಮಕ್ಕಳಿಗೆ ಬೇಕಾಗಿದೆ ಸರಕಾರಿ ಮೆಡಿಕಲ್ ಕಾಲೇಜು. ವಿಜಾಪುರದ ಸರಕಾರಿ ಮೆಡಿಕಲ್ ಕಾಲೇಜಿಗೆ ಬೇಕಾಗಿಲ್ಲ ಕೋಟಿ ಕೋಟಿ ಹಣ. ಅಲ್ಲೀಗ ಭೇಕಾಗಿರುವುದು ರಾಜಕಾರಣಿಗಳ ಇಚ್ಛಾಶಕ್ತಿ ಮತ್ತು ಸ್ವಲ್ಪ ಹಣ.
ಸರ್ಕಾರಿ ಆಸ್ತಿಯನ್ನು ಮಾರುವ ಹಕ್ಕು ಈ ಸರಕಾರಕ್ಕೆ ಕೊಟ್ಟವರು ಯಾರು?
ಎಚ್ಚೆತ್ತುಕೊಳ್ಳಿ ವಿಜಾಪುರದ ಜನರೇ!
ಇಂದು ನಾವು ಮೌನವಾಗಿದ್ದರೆ, ನಾಳೆ ನಮ್ಮ ಮಕ್ಕಳಿಗೆ ಓದಲು ಶಾಲೆಗಳಿರುವುದಿಲ್ಲ. ಗರ್ಭಿಣಿ ತಾಯಿಗೆ ಹೆರಿಗೆ ಆಸ್ಪತ್ರೆ ಇಲ್ಲ. ಬಡವನಿಗೆ ಸಂಜೀವಿನ ಇಲ್ಲವೇ ಇಲ್ಲ.
ಸಾರ್ವಜನಿಕ ಆಸ್ತಿ ಕಾಪಾಡುವುದು ಅಪರಾಧವಲ್ಲ, ಅದು ನಮ್ಮ ಹಕ್ಕು.
ಸಾರ್ವಜನಿಕ ಆಸ್ತಿಯನ್ನು ನುಂಗಿ ನೀರು ಕುಡಿಯುವ ಕದಿಮರಿಗೆ ರಾಜ ಮರ್ಯಾದೆ. ಸತ್ಯ ಕೇಳುವ ಹೋರಾಟಗಾರನಿಗೆ ಜೈಲು ಭಾಗ್ಯ. ಇಂತಹ ಅಧರ್ಮದ ಆಡಳಿತ.
ಸಮಾಜವಾದಿ ಸಿದ್ಧರಾಮಯ್ಯನವರಿಗೆ ಬಡವರ ದ್ವನಿ ಕೇಳುತ್ತಿಲ್ಲವೆ? ಬಡವರ ಆಶಾಕಿರಣವೆಂದು ಬಿಂಬಿತ ಎಂ. ಬಿ. ಪಾಟೀಲರಿಗೆ ಬಡವನ ಕೂಗು ನಿದ್ದೆ ತರಿಸೀತೆ? ಸಾವಿರಾರು ಕೋಟಿ ಮಂಜೂರು ಮಾಡಿ ಆಸ್ಪತ್ರೆಗೆ ಸಂಜೀವಿನಿಯಾಗಿದ್ದ ಮಾಜಿ ಆರೋಗ್ಯ ಸಚಿವರು ಇಂದಿನ ಸಕ್ಕರೆ ಸಚಿವರಿಗೆ ಬಡವನ ಆರ್ಥನಾದ ಅರ್ಥವಾಗುತ್ತಿಲ್ಲವೆ? ನಾಡಗೌಡರೆ, ಮನಗೂಳಿಯವರೆ, ಬಿಜಾಪುರ ನಗರ ಶಾಸಕರೆ ಇಂದು ನೀವು ಬಡವರ ಪರವೆಂದು ಸಿದ್ಧಪಡಿಸುವ ಕಾಲ ಬಂದಿದೆ. ನಾವು ನಿಮ್ಮ ಹಿಂಬಾಲಕರು.
ನಿಮಗೆ ಮತ ಹಾಕಿದ ಮತದಾರರು. ನೀವು ನಮ್ಮವರೆಂದು ಸುಮ್ಮನಿರಲಾಗದು. ಬಂಗಾರದ ಸೂಜಿ ನಮ್ಮದೆಂದು ಕಣ್ಣು ಚುಚ್ಚಿಕೊಳ್ಳಲಾದೀತೆ?
ಸರಕಾರಕ್ಕೆ ನಮ್ಮ ಎಚ್ಚರಿಕೆ: ನಿಮ್ಮ ‘ಪಿಪಿಪಿ’ ಎಂಬ ಮಾಯಾಜಾಲವನ್ನು ತಕ್ಷಣವೇ ನಿಲ್ಲಿಸಿ. ಬಡವರ ಆಸ್ತಿಯನ್ನು ಬಂಡವಾಳಶಾಹಿಗಳ ಪಾಲಾಗುವುದನ್ನು ತಡೆಯಿರಿ. ಹೋರಾಟಗಾರರ ಕೂದಲು ಕೊಂಕಾಗದಂತೆ ನೋಡಿಕೊಳ್ಳಿ, ಅವರನ್ನು ತಕ್ಷಣ ಬಿಡುಗಡೆ ಮಾಡಿ, ಅವರ ಮೇಲಿನ ಕೇಸು ವಾಪಸ್ಸು ಪಡೆಯಿರಿ. ಇಲ್ಲದಿದ್ದರೆ ವಿಜಾಪುರದ ಪ್ರತಿ ಮನೆಯಿಂದಲೂ ಪ್ರತಿಭಟನೆಯ ಕಿಚ್ಚು ಏಳಲಿದೆ!
Laxmi News 24×7