ಬೆಂಗಳೂರು: “ಕೋಗಿಲು ಅಕ್ರಮ ಗುಡಿಸಲು-ಮನೆ ತೆರವು ಪ್ರಕರಣದಲ್ಲಿ ಹೊರದೇಶದವರಿಗೆ ಮನೆ ನೀಡಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ. ಇದರ ವಿರುದ್ಧ ರಾಜ್ಯಪಾಲರಿಗೆ ಮನವಿ ನೀಡುತ್ತೇವೆ” ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಎಚ್ಚರಿಸಿದ್ದಾರೆ.
ಬೆಂಗಳೂರಿನ ಯಲಹಂಕದ ಕೋಗಿಲು ಲೇಔಟ್ ಬಳಿಯಿರುವ ಫಕೀರ್ ಕಾಲೋನಿ ಮತ್ತು ನಸೀಮ್ ಬಡಾವಣೆಯಲ್ಲಿ ಮನೆ-ಗುಡಿಸಲುಗಳ ನೆಲಸಮ ಕುರಿತು ಸತ್ಯಾಸತ್ಯತೆಯನ್ನು ತಿಳಿಯಲು ರಾಜ್ಯ ಬಿಜೆಪಿ ವತಿಯಿಂದ ಸತ್ಯಶೋಧನಾ ತಂಡವನ್ನು ರಚಿಸಿದ್ದು, ಆ ತಂಡ ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸಭೆ ನಡೆಸಿತು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಎಸ್.ಆರ್. ವಿಶ್ವನಾಥ್, “ಬಿಬಿಎಂಪಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಗುಡಿಸಲು ಕಟ್ಟಿಕೊಂಡಿದ್ದಾರೆ. ಇವತ್ತು ನಿಜವಾದ ಫಲಾನುಭವಿ 10.5 ಲಕ್ಷ ರೂಪಾಯಿ ದುಡ್ಡು ಕಟ್ಟಬೇಕಾಗುತ್ತದೆ. ಬ್ಯಾಂಕ್ ಸಾಲ; ಇಲ್ಲವೇ ಸ್ವಂತ ಪ್ರಯತ್ನದಿಂದ ಇದನ್ನು ಕಟ್ಟಬೇಕು. ಇವನಿಗೆ ಬಿಬಿಎಂಪಿಯಿಂದ 5 ಲಕ್ಷ ರೂಪಾಯಿ, ಅಲ್ಪಸಂಖ್ಯಾತ ಇಲಾಖೆಯಿಂದ ಎರಡೂವರೆ ಲಕ್ಷ ರೂಪಾಯಿ. ಇವೆಲ್ಲವನ್ನು ಕೊಟ್ಟು ಕೇವಲ ಎರಡೂವರೆ ಲಕ್ಷದಲ್ಲಿ ಮನೆ ಕೊಡುತ್ತೇವೆ ಅಂದರೆ ಈಗ ಏನು ಒಂದು ಲಕ್ಷ ಮನೆಗಳನ್ನು ಕಟ್ಟುತ್ತಿದ್ದಾರೆ. ಬೆಂಗಳೂರು ಸುತ್ತು ಮುತ್ತಲು 45 ಸಾವಿರ ಮನೆಗಳು ಆಗುತ್ತಿವೆ. ಅವರು ಯಾರೂ ಕೂಡ ದುಡ್ಡು ಕಟ್ಟಲ್ಲ. ಅವರೆಲ್ಲ 2.5 ಲಕ್ಷಕ್ಕೇ ಸ್ಟಿಕ್ ಆನ್ ಆಗುತ್ತಾರೆ. ಇದು ಸರ್ಕಾರಕ್ಕೆ ದೊಡ್ಡ ಮುಜುಗರ ಆಗಲಿದೆ. ದೊಡ್ಡ ಹೊಡೆತ ಕೊಡಲಿದೆ. ಇದಕ್ಕೂ ಮೀರಿ ಏನಾದ್ರೂ ಮನೆಗಳನ್ನು ಕೊಟ್ಟರೆ ನ್ಯಾಯಾಲಯಕ್ಕೆ ಹೋಗುತ್ತೇವೆ. ಈಗಾಗಲೇ ದಾಖಲೆಗಳನ್ನು ಕೂಡ ಸಂಗ್ರಹ ಮಾಡುತ್ತಿದ್ದಾರೆ” ಎಂದರು.
“ನ್ಯಾಯಾಲಯಕ್ಕೆ ಹೋಗಿ ಪ್ರಶ್ನೆ ಮಾಡುವುದಲ್ಲದೇ ಮಾನ್ಯ ರಾಜ್ಯಪಾಲರಿಗೆ ಇದರ ಬಗ್ಗೆ ಮನವಿ ಕೊಡುತ್ತೇವೆ ಎಂದರು. ನಾಳೇನೆ ಮನೆಗಳ ಹಂಚಿಕೆ ಮಾಡಲಿಕ್ಕೆ ಪ್ಲಾನ್ ಮಾಡ್ಕೊಂಡಿದ್ದೀರಾ?. ಅದು ಸಾಧ್ಯ ಇಲ್ಲ. ಸುಮ್ಮನೆ ಅವರು ಹೇಳಿರಬಹುದು. ಅವರು ಇಲ್ಲಿ ಐದು ವರ್ಷ ವಾಸ ಇದ್ದಾರೆ ಅನ್ನೋದಕ್ಕೆ ದಾಖಲೆಗಳನ್ನು ಕೊಡಬೇಕು. 18 ದಾಖಲೆಗಳನ್ನು ಕೇಳಿದ್ದಾರೆ ಅವನ್ನು ಕೊಡಬೇಕು. ಯಾವ ವಿಶೇಷ ಪ್ರಕರಣ? ಹಾಗೆಲ್ಲ ಮಾಡಲು ಆಗೋದಿಲ್ಲ” ಎಂದು ಹೇಳಿದರು.
“ಪಾಕಿಸ್ತಾನ, ಬಾಂಗ್ಲಾದಿಂದ ಬಂದಿರುವ ಹಿಂದೂ, ಕ್ರಿಶ್ಚಿಯನ್, ಸಿಖ್ಖರು ಸೇರಿ ಅನೇಕ ಅಲ್ಪಸಂಖ್ಯಾತರು ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದಾರೆ. ಅವರಿಗೆ ಕೂಡ ಯಾವ ಸರ್ಕಾರಗಳು ಇಲ್ಲಿವರೆಗೂ ಮನೆ ಕೊಟ್ಟಿಲ್ಲ. ಅವರಿಗೆ ಪೌರತ್ವ ಕೊಡಬೇಕು ಅಂತ ಅಂದರೆ ಇದೇ ಕಾಂಗ್ರೆಸ್ ಅವರು, ಇದೇ ಕಮ್ಯುನಿಸ್ಟ್ ಪಕ್ಷದವರು ದೊಡ್ಡ ಹೋರಾಟ ಮಾಡುತ್ತಾರೆ. ಆದರೆ ಇವತ್ತು ಬೇರೆ ದೇಶದಿಂದ ಬಂದವರಿಗೆ ತುರ್ತು ಏನಿದೆ” ಎಂದು ಕೇಳಿದರು.
“ಇದು ಅಲ್ಪಸಂಖ್ಯಾತರ ವೋಟಿನ ತುಷ್ಟೀಕರಣದ ಮುಂದುವರೆದ ಭಾಗ. ಈಗೇನು ಕೇರಳ ಎಲೆಕ್ಷನ್ ನಡೀತಾ ಇದೆ. ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಸರ್ಕಾರಗಳಿಗೆ ಅಲ್ಪಸಂಖ್ಯಾತರ ವೋಟ್ ತೆಗೊದುಕೊಳ್ಳಲು ಇಲ್ಲಿ ನಮ್ಮ ಕರ್ನಾಟಕವನ್ನು ಬಲಿ ಕೊಡುವ ಕೆಲಸ ಮಾಡಿದ್ದಾರೆ. ಇದರ ವಿರುದ್ಧ ನಾವು ನ್ಯಾಯಾಲಯದಲ್ಲೂ ಹೋರಾಟ ಮಾಡುತ್ತೇವೆ. ರಾಜ್ಯಪಾಲರ ಬಳಿ ಹೋಗುತ್ತೇವೆ. ಸ್ಥಳೀಯವಾಗಿ ಕೂಡ ಏನು ಹೋರಾಟ ಮಾಡಬೇಕೋ ಮಾಡುತ್ತೇವೆ” ಎಂದು ತಿಳಿಸಿದರು.
Laxmi News 24×7