ಬೆಳಗಾವಿ: ಹಿಂಡಲಗಾ ಗ್ರಾಮದಲ್ಲಿರುವ ಇಲ್ಲಿನ ಕೇಂದ್ರ ಕಾರಾಗೃಹದ ಗೋಡೆಯ ಮೇಲಿಂದ ಕಿಡಿಗೇಡಿಯೋರ್ವ ಮೊಬೈಲ್, ಡ್ರಗ್ಸ್ ಎಸೆದಿರುವ ಪ್ರಕರಣಕ್ಕೆ ಡಿಐಜಿ ಟಿ.ಪಿ.ಶೇಷ, ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು ಪ್ರತಿಕ್ರಿಯಿಸಿದ್ದಾರೆ.
ಮೊಬೈಲ್, ಡ್ರಗ್ಸ್ ಎಸೆದಿರುವ ಸಿಸಿಟಿವಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು ಜೈಲಿಗೆ ದೌಡಾಯಿಸಿದರು. ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಮಾಹಿತಿ ಕಲೆ ಹಾಕಿದರು. ಅಲ್ಲದೇ ಸಿಸಿಬಿ ಪೊಲೀಸರು ಕೂಡ ಪರಿಶೀಲನೆ ನಡೆಸಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಈ ಸಂಬಂಧ ಐದು ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ 12 ಮೊಬೈಲ್, 4 ಸಿಮ್ ಕಾರ್ಡ್, 1 ಚಾರ್ಜರ್, 5 ಚಾರ್ಜರ್ ಕೇಬಲ್, 1 ಅಡಾಪ್ಟರ್ ಪತ್ತೆ ಆಗಿವೆ. ಇದರ ಜೊತೆಗೆ 366 ಗ್ರಾಂ ಗಾಂಜಾ ಸಿಕ್ಕಿದೆ. ಜೈಲಿನಲ್ಲಿ ಮೊಬೈಲ್, ಗಾಂಜಾ, ಚಾರ್ಜರ್ಗಳು ಸಿಕ್ಕಿರುವ ಬಗ್ಗೆ ಡಿ.16, ಡಿ.17, ಡಿ.23, ಡಿ.29 ಮತ್ತು ಡಿ.31ರಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣಗಳು ದಾಖಲಾಗಿವೆ ಎಂದು ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.![]()
ಈ ಎಲ್ಲಾ ಲೋಪದೋಷದ ಕುರಿತು ವಿವರವಾದ ಮಾಹಿತಿ ನೀಡುವಂತೆ ಬಂಧಿಖಾನೆ ಉತ್ತರ ವಲಯ ಐಜಿಪಿ ಟಿ.ಪಿ. ಶೇಷ, ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ವಿ. ಕೃಷ್ಣಮೂರ್ತಿ ಅವರಿಗೆ ಡಿಜಿಪಿ ಅಲೋಕ್ ಕುಮಾರ ಸೂಚಿಸಿದ್ದಾರೆ. ಅಲ್ಲದೇ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರಿಂದಲೂ ಮಾಹಿತಿ ಪಡೆದಿದ್ದಾರೆ.
ಬಂಧಿಖಾನೆ ಉತ್ತರ ವಲಯ ಡಿಐಜಿ ಟಿ.ಪಿ. ಶೇಷ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, “ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು ಒಂದು ಅಥವಾ ಎರಡು ತಿಂಗಳ ಹಿಂದಿನದ್ದು. ಈ ಬಗ್ಗೆ ಈಗಾಗಲೇ ಕೇಸ್ ಕೂಡ ಮಾಡಿದ್ದೇವೆ. ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸಿಸಿಟಿವಿ ನಮ್ಮವರೇ ಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಡಿಜಿಯವರು ತನಿಖೆ ಮಾಡಿ ವರದಿ ನೀಡುವಂತೆ ಹೇಳಿದ್ದಾರೆ. ಕೆಎಸ್ಐಎಸ್ಎಫ್ ಸಿಬ್ಬಂದಿಗಳದ್ದು ಮೇಲ್ನೋಟಕ್ಕೆ ಸ್ವಲ್ಪ ಮಟ್ಟಿನ ಕರ್ತವ್ಯಲೋಪ ಕಂಡುಬಂದಿದೆ. ಈಗಾಗಲೇ ಅವರಿಗೆ ಎಚ್ಚರಿಕೆ ಕೂಡ ನೀಡಲಾಗಿದೆ. ಬೇಜವಾಬ್ದಾರಿ ಕಂಡುಬಂದಿದೆ. ಡಿಜಿಯವರ ಸೂಚನೆ ಮೇರೆಗೆ ಮೊನ್ನೆ ದಿನ ಜೈಲು ತಪಾಸಣೆ ಮಾಡಿದ್ದೇವೆ. ಇಲ್ಲಿಯವರೆಗೆ ಹಿಂಡಲಗಾ ಜೈಲಿನಲ್ಲಿ 12 ಮೊಬೈಲ್, 4 ಸಿಮ್, 1 ಚಾರ್ಜರ್, 5 ಚಾರ್ಜರ್ ಕೇಬಲ್ ಸಿಕ್ಕಿವೆ. ಆದರೆ, ಮಾದಕ ವಸ್ತುಗಳು ಪತ್ತೆ ಆಗಿಲ್ಲ” ಎಂದರು.
Laxmi News 24×7