ಬೆಂಗಳೂರು : ಮದ್ಯದ ಅಮಲಿನಲ್ಲಿ ತೂರಾಡುತ್ತ ರಸ್ತೆ ಮೇಲೆ ಬಿದ್ದವನ ಮೇಲೆ ಅಚಾನಕ್ಕಾಗಿ ಬಸ್ ಹರಿದಿದ್ದರಿಂದಾಗಿ ಆತ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ನಡೆದಿದ್ದೇನು? ‘ಡಿಸೆಂಬರ್ 13ರಂದು ಪಾನಮತ್ತನಾಗಿ ಹೆಗ್ಗನಹಳ್ಳಿ ಮುಖ್ಯ ರಸ್ತೆಯಲ್ಲಿ ತೂರಾಡುತ್ತಾ ನಡೆದುಕೊಂಡು ಹೋಗುತ್ತಿದ್ದ ಚೇತನ್ ಕುಮಾರ್ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಾಗ, ಹಿಂಬದಿಯಿಂದ ಬಂದ ಬಸ್ ಆತನ ಮೇಲೆ ಹರಿದಿತ್ತು. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಮತ್ತೊಂದೆಡೆ ಆ್ಯಕ್ಸಿಡೆಂಟ್ ಬಳಿಕ ಭಯಗೊಂಡಿದ್ದ ಬಸ್ ಚಾಲಕ ನರೇಂದ್ರ ಸ್ಥಳದಿಂದ ಪರಾರಿಯಾಗಿದ್ದ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಚಾಲಕ ನರೇಂದ್ರನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆತ ಪೀಣ್ಯಾದಲ್ಲಿ ವಾಸವಿದ್ದ, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ’ ಎಂದು ಬೆಂಗಳೂರು ಸಂಚಾರ ಪಶ್ಚಿಮ ವಿಭಾಗದ ಡಿಸಿಪಿ ಡಾ. ಅನೂಪ್ ಎ ಶೆಟ್ಟಿ ತಿಳಿಸಿದ್ದಾರೆ.
ಕಂಟೇನರ್ ಸರಣಿ ಅಪಘಾತದಿಂದ ಐವರಿಗೆ ಗಾಯ, ವಾಹನಗಳು ಜಖಂ: ಅತಿವೇಗ ಹಾಗೂ ಅಜಾಗರೂಕತೆಯಿಂದ ಕಂಟೇನರ್ ಚಾಲನೆ ಮಾಡಿದ ಪರಿಣಾಮ ನಾಲ್ಕು ಕಾರು, ಎರಡು ಬೈಕ್ ಮತ್ತು ಒಂದು ಆಟೋಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಓರ್ವ ಮಹಿಳೆಯ ಕಾಲು ಮುರಿತ ಸೇರಿ ಐವರು ಗಾಯಗೊಂಡು ಆಸ್ಪತ್ರೆಗೆ ಸೇರಿದ ಘಟನೆ ಆನೇಕಲ್ ತಾಲೂಕಿನಲ್ಲಿ ಭಾನುವಾರ ನಡೆದಿದೆ.
ಅತ್ತಿಬೆಲೆ – ಆನೇಕಲ್ ಮಾರ್ಗವಾಗಿ ಆದಿತ್ಯ ಬಿರ್ಲಾ ಕಾರ್ಗೋ ಶಿಪ್ಟಿಂಗ್ ಕಂಟೇನರ್ ಚಾಲಕ ಪಾನಮತ್ತನಾಗಿ ಬಂದು, ಬೆಸ್ತಮಾನಹಳ್ಳಿಯ ಮುಖ್ಯರಸ್ತೆಯಲ್ಲಿ ಆಟೋವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಡಿಕ್ಕಿಯ ರಭಸಕ್ಕೆ ಆಟೋದಲ್ಲಿದ್ದ ಮಹಿಳೆ ರಸ್ತೆಗೆ ಹಾರಿಬಿದ್ದ ಪರಿಣಾಮ ಕಾಲಿಗೆ ಏಟಾಗಿ ಕಾಲು ಮುರಿದಿದೆ. ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ತಕ್ಷಣ ಕಂಟೇನರ್ ಕ್ಲೀನರ್ ಓಂ ನಾರಾಯಣ್ ಪಟೇಲ್ ಲಾರಿಯಿಂದ ಜಿಗಿದು ತಪ್ಪಿಸಿಕೊಂಡಿದ್ದ. ಬಳಿಕ ಆತ ಆನೇಕಲ್ ಪೊಲೀಸರ ಕೈಗೆ ಸಿಕ್ಕಿದ್ದಾನೆ.
Laxmi News 24×7