ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಅವಹೇಳನಾಕಾರಿ ಪದ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಈ ಆದೇಶದಿಂದಾಗಿ ಸಿ.ಟಿ. ರವಿ ಅವರಿಗೆ ಹಿನ್ನಡೆಯಾಗಿದ್ದು, ಇದೀಗ ಪ್ರಕರಣದ ವಿಚಾರಣೆ ಎದುರಿಸುವ ಅನಿವಾರ್ಯತೆ ಉಂಟಾಗಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಸಿ.ಟಿ.ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಸದನದಲ್ಲಿ ಅರ್ಜಿದಾರ ರವಿ ಒಂದು ವೇಳೆ ಅವಹೇಳನಕಾರಿ ಪದ ಬಳಕೆ ಮಾಡಿದ್ದೇ ಆದಲ್ಲಿ ಮಹಿಳೆಯ ಘನತೆಗೆ ಧಕ್ಕೆ ತರುವಂತಾಗಿದೆ. ಅಲ್ಲದೆ, ಆ ರೀತಿಯ ಪದ ಬಳಕೆ ಮಾಡಿದ್ದೇ ಆದಲ್ಲಿ ಅದು ಸದನದಲ್ಲಿನ ಶಾಸಕರ ರಕ್ಷಣಾ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಪೀಠ ತಿಳಿಸಿ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಅಲ್ಲದೆ, ವಾಸ್ತವವಾಗಿ ಅರ್ಜಿದಾರರು ದೂರುದಾರರ ವಿರುದ್ಧ ಅಶ್ಲೀಲ ಪದ ಉಚ್ಚರಿಸಿದ್ದಾರೆಯೇ ಅಥವಾ ಅವರ ಘನತೆ, ನಮ್ರತೆಯನ್ನು ಕುಗ್ಗಿಸುವ-ಕೆಣಕುವಂತಹ ಸನ್ನೆ ತೋರಿದ್ದಾರೆಯೇ? ಎಂಬುದು ಇಲ್ಲಿಯವರೆಗೆ ನಿಗೂಢವಾಗಿದೆ. ಅದ ಕಾರಣ ಆ ಕುರಿತು ತನಿಖೆ ಮಾಡಬೇಕಾಗಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.
ಮಹಿಳೆ ಗೌರವಕ್ಕೆ ಹಾನಿ ನಾಗರಿಕ ಸಮಾಜ ಒಪ್ಪಲ್ಲ: ಮಹಿಳೆಯ ಗೌರವ ಮತ್ತು ಖ್ಯಾತಿಯು ಯಾವುದೇ ಸಮಾಜದ ಮೂಲಭೂತ ನಾಗರಿಕತೆಯನ್ನು ತೋರಿಸುತ್ತದೆ. ನಾಗರಿಕ ಸಮಾಜದಲ್ಲಿ ಯಾವುದೇ ನಾಗರಿಕನು ಮಹಿಳೆಯ ಗೌರವಕ್ಕೆ ಧಕ್ಕೆ ಉಂಟು ಮಾಡಬಹುದು ಎಂಬುದನ್ನು ಕಲ್ಪಿಸಿಕೊಳ್ಳಲಾಗದು. ಅಂತಹ ಚಿಂತನೆಯೇ ವಿಷಾದಕರ ಮಾತ್ರವಲ್ಲ, ಶೋಚನೀಯವೂ ಆಗಿದೆ. ಪ್ರಕರಣದಲ್ಲಿನ ವಿಷಯವು ಅರ್ಜಿದಾರರ ದೈಹಿಕ ಕ್ರಿಯೆಗಳಲ್ಲ. ಬದಲಾಗಿ ಮಹಿಳೆಯ ನಮ್ರತೆಯನ್ನು ಕೆರಳಿಸುವ ಮೌಖಿಕ ಕ್ರಿಯೆಗಳಾಗಿರುತ್ತದೆ. ಮಹಿಳೆಯ ನಮ್ರತೆಯನ್ನು ಅವಮಾನಿಸುವುದು ಶಿಕ್ಷಾರ್ಹವಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಹಾಗೆಯೇ, ಅರ್ಜಿದಾರರು ದೂರದಾರರ ಬಗ್ಗೆ ಬಳಸಿರುವ ಪದವು ನಿಸ್ಸಂದೇಹವಾಗಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 75 (ಲೈಂಗಿಕ ಕಿರುಕುಳ) ಮತ್ತು ಮತ್ತು 79 ಅಡಿಯ (ಉದ್ದೇಶಪೂರ್ವಕವಾಗಿ ಮಹಿಳೆ ಘನತೆ ಹಾನಿ) ಅಪರಾಧದ ಅಂಶಗಳನ್ನು ಒಳಗೊಂಡಿದೆ. ಅರ್ಜಿದಾರರು ಬಳಸಿರುವ ಪದವು ಮಹಿಳೆಯ ನಮ್ರತೆ ಕೆರಳಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅದು ಸದನದ ಕಾರ್ಯಚಟುವಟಿಕೆ/ವ್ಯವಹಾರಕ್ಕೆ ಯಾವುದೇ ಸಂಬಂಧ ಹೊಂದಿರುವುದಿಲ್ಲ. ಕ್ರಿಮಿನಲ್ ಪ್ರಾಸಿಕ್ಯೂಷನ್ನಿಂದ ಶಾಸಕರಿಗೆ ವಿನಾಯಿತಿ/ರಕ್ಷಣೆ ದೊರೆಯುವುದಿಲ್ಲ ಎಂದು ಪೀಠ ಹೇಳಿದೆ.
ಜೊತೆಗೆ, ಈ ಆದೇಶದಲ್ಲಿ ವ್ಯಕ್ತಪಡಿಸಿರುವ ಈ ಅಭಿಪ್ರಾಯಗಳು ಕೇವಲ ಪ್ರಕರಣ ರದ್ದುಪಡಿಸಬೇಕೆಂಬ ಅರ್ಜಿದಾರರ ಕೋರಿಕೆಗೆ ಸೀಮಿತವಾಗಿರುತ್ತದೆ. ಪ್ರಕರಣದ ತನಿಖೆ ಅಥವಾ ವಿಚಾರಣಾ ನ್ಯಾಯಾಲಯದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
Laxmi News 24×7