Breaking News

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the love

ಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು ಸೇರಿದಂತೆ ಹಲವು ಮಹಾನ್ ವ್ಯಕ್ತಿಗಳು ಜನಿಸಿದ್ದಾರೆ. ಅಂಬಿಗರ ಚೌಡಯ್ಯ 12 ಶತಮಾನದ ವೀರಶೈವ ಲಿಂಗಾಯತ ಬಸವೇಶ್ವರರ ಸಮಕಾಲೀನರು. ಅವರ ಜೊತೆ ಅನುಭವ ಮಂಟಪದಲ್ಲಿ ಭಾಗವಹಿಸಿದ್ದ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಸಹ ಒಬ್ಬರು. ತಮ್ಮ ನೇರ, ದಿಟ್ಟ ವಚನಗಳಿಂದ ಸಮಾಜದ ಅಂಕುಡೊಂಕು ತಿದ್ದಿದ್ದ ಚೌಡಯ್ಯ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದು ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರದಲ್ಲಿ.

ಐಕ್ಯ ಮಂಟಪಕ್ಕೆ ಜಲದಿಗ್ಬಂಧನ: ಇಲ್ಲಿ ಹರಿಯುವ ತುಂಗಭದ್ರಾ ನದಿಯ ತಟದಲ್ಲಿ ಚೌಡಯ್ಯ ಐಕ್ಯರಾಗಿದ್ದು, ಅಲ್ಲಿ ಐಕ್ಯ ಮಂಟಪ ನಿರ್ಮಿಸಲಾಗಿದೆ. ಆದರೆ, ಮಳೆಗಾಲ ಬಂದರೆ ಸಾಕು ಶರಣ ಚೌಡಯ್ಯ ಐಕ್ಯ ಮಂಟಪ ಜಲಾವೃತವಾಗುತ್ತದೆ. ಸದ್ಯ ಮಲೆನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ತುಂಗಭದ್ರಾ ನದಿ ಮೈತುಂಬಿ ಹರಿಯುತ್ತಿದ್ದು, ಐಕ್ಯ ಮಂಟಪಕ್ಕೆ ಜಲದಿಗ್ಬಂಧನವಾಗಿದೆ. ಇದರಿಂದ ಶರಣ ಅಂಬಿಗರ ಚೌಡಯ್ಯ ಐಕ್ಯ ಮಂಟಪಕ್ಕೆ ಪೂಜೆ ಸಲ್ಲಿಸಲು ಬರುವ ಭಕ್ತರಿಗೆ ತೊಂದರೆಯಾಗುತ್ತಿದೆ.

ಭಕ್ತರು ತೆಪ್ಪದಲ್ಲಿ ತೆರಳಿ ಐಕ್ಯ ಮಂಟಪಕ್ಕೆ ಪೂಜೆ ಸಲ್ಲಿಸಿ ಬರುತ್ತಿದ್ದಾರೆ. ತೆಪ್ಪದಲ್ಲಿ ಆರತಿ ತಟ್ಟೆ ಗಂಟೆಯನ್ನ ತಗೆದುಕೊಂಡು ಹೋಗಿ ಭಕ್ತರು ಪೂಜೆ ನೆರವೇರಿಸುತ್ತಿದ್ದಾರೆ. ನೀರಿನ ಹರಿವು ಹೆಚ್ಚಾದರೆ ಅದೂ ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಸ್ಥಳೀಯರು. ಆದರೆ, ಅಂಬಿಗರ ಚೌಡಯ್ಯನ ಐಕ್ಯ ಮಂಟಪವನ್ನ ಕೂಡಲಸಂಗಮದಲ್ಲಿರುವ ಬಸವೇಶ್ವರರ ಐಕ್ಯ ಮಂಟಪದಂತೆ ನಿರ್ಮಿಸಬೇಕೆಂಬುದು ಅಂಬಿಗ ಸಮುದಾಯದವರ ಆಗ್ರಹ. ಆದರೆ ಐಕ್ಯ ಮಂಟಪದ ಹತ್ತಿರದಲ್ಲಿರುವ ಪುರಾತತ್ವ ಇಲಾಖೆಗೆ ಸೇರಿದ 11ನೇ ಶತಮಾನದ ಮುಕ್ತೇಶ್ವರ ದೇವಸ್ಥಾನದ ನಿಯಮಗಳು ಇದಕ್ಕೆ ಅಡ್ಡಿಪಡಿಸುತ್ತಿವೆ.

ಪುರಾತತ್ವ ಇಲಾಖೆಗೆ ಸೇರಿದ ಈ ದೇವಸ್ಥಾನದ ನೂರು ಅಡಿ ಜಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಬರುವುದಿಲ್ಲ. ದೇವಸ್ಥಾನದಂದ ಕೇವಲ 25 ಮೀಟರ್ ದೂರದಲ್ಲಿ ಐಕ್ಯ ಮಂಟಪವಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಸೇರಿ ಈ ಕಾರ್ಯ ಮಾಡಬೇಕಿದೆ. ಹೀಗಾಗಿ ಐಕ್ಯ ಮಂಟಪ ನಿರ್ಮಾಣದ ರೂಪುರೇಷೆಗಳು ಇನ್ನು ಸಿದ್ಧವಾಗಿಲ್ಲ. ಆದರೆ, ಅಂಬಿಗ ಸಮುದಾಯದವರು ಮಾತ್ರ ಆದಷ್ಟು ಬೇಗ ಐಕ್ಯ ಮಂಟಪ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ