ತುಮಕೂರು: ಮೈತ್ರಿ ಸರ್ಕಾರದ ಪತನ ಕುರಿತು ಸಚಿವ ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ತುಮಕೂರಿನ ಗೂಗಡನಹಳ್ಳಿ ಕೆರೆಯ ವೀಕ್ಷಣೆ ವೇಳೆ ರಮೇಶ್ ಜಾರಕಿಹೊಳಿ ಮತ್ತು ಕೆ.ಎನ್.ರಾಜಣ್ಣ ಭೇಟಿಯಾಗಿದ್ದರು. ಈ ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬೀಳಿಸಿದ್ದು ನಾನೇ ಎಂದು ಸಚಿವ ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಮೈತ್ರಿ ಸರ್ಕಾರ ಪತನಕ್ಕಾಗಿ ಕಾಂಗ್ರೆಸ್ ಮಾಜಿ ಶಾಸಕ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ನಮಗೆ ಬೆಂಬಲ ನೀಡಿದರು. ಸರ್ಕಾರ ಬೀಳಿಸಲು ಒಂದು ಉದ್ದೇಶವಿತ್ತು. ಹಾಗಾಗಿ ಸರ್ಕಾರ ಪತನವಾಯ್ತು ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಹೇಳಿಕೆ ನೀಡುವಾಗ ಪಕ್ಕದಲ್ಲಿಯೇ ಕುಳಿತಿದ್ದ ಕೆ.ಎನ್.ರಾಜಣ್ಣ, ನಗುತ್ತಾ ನಾವು ಏನು ಅಂತ ಎಲ್ಲರಿಗೂ ಗೊತ್ತಿದೆ. ಯಾವುದೂ ಮುಚ್ಚುಮರೆ ಮಾಡುವ ಪ್ರಶ್ನೆ ಬರಲ್ಲ. ಸರ್ಕಾರ ಪತನದಲ್ಲಿ ಯಾರ ಕೈವಾಡ ಇದೆ ಅಂತ ಗೊತ್ತಿದೆ. ಮತ್ಯಾಕೆ ಆ ವಿಷಯವನ್ನ ಹೇಳ್ತೀರಿ ಎಂದರು.
ನಮಗೆ ಸಚಿವರನ್ನು ಮಾಡ್ತಾರೆ, ನಾನು ಜಲಸಂಪನ್ಮೂಲ ಸಚಿವ ಆಗಬೇಕೆಂದು ಸರ್ಕಾರ ಬೀಳಿಸಲಿಲ್ಲ. ಒಂದು ಉದ್ದೇಶಕ್ಕಾಗಿ ಮೈತ್ರಿ ಸರ್ಕಾರ ಪತನವಾಯ್ತು. ಬಾಲ್ಯದಿಂದಲೂ ನಾವು ಅವ್ರು ಕಾಂಗ್ರೆಸ್ ನಲ್ಲಿದ್ದೀವಿ. ಬದಲಾದ ರಾಜಕಾರಣದಲ್ಲಿ ನಾವು ಬಿಜೆಪಿ ಸೇರಿದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಾಲದಲ್ಲಿದ್ದ ಕಾಂಗ್ರೆಸ್ ಈಗ ಇಲ್ಲ. ರಾಜಣ್ಣ ಅವರು ಬಿಜೆಪಿಗೆ ಬನ್ನಿ ಅಂತಾ ಹೇಳಿದ್ದೀನಿ. ಆದ್ರೆ ಅವರು ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂದು ಬಹಿರಂಗವಾಗಿಯೇ ಪಕ್ಷಕ್ಕೆ ಆಹ್ವಾನಿಸಿದರು.