ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣಕ್ಕೆ ಭೇಟಿ ನೀಡಿದ ಚಲನಚಿತ್ರ ನಟ ಚೇತನ್ ಅಹಿಂಸಾ, “ಸಮ ಸಮಾಜ ನಿರ್ಮಾಣ ಹಾಗೂ ಸಂವಿಧಾನದ ಆಶಯಗಳ ಸಾಕಾರಕ್ಕೆ ರಾಜ್ಯಾದ್ಯಂತ ಜನಜಾಗೃತಿ ಮೂಡಿಸಲಾಗುತ್ತಿದೆ” ಎಂದು ಹೇಳಿದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸಿನ ಸಮಾನತೆಯ ಸಮಾಜ ನಿರ್ಮಾಣಕ್ಕೆ ಎಲ್ಲ ವರ್ಗದ ಜನರು ಒಂದಾಗಬೇಕೆಂದು ಅವರು ಕರೆ ನೀಡಿದರು.
ಬೈಲಹೊಂಗಲ ನಗರದ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ಚೇತನ್ , “ಸಂವಿಧಾನದ ಮೌಲ್ಯಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಸಂಘಟನೆ ಬಲಪಡಿಸುವ ಕಾರ್ಯ ನಡೆಯುತ್ತಿದೆ” ಎಂದರು.ರಾಜ್ಯದ ಅಭಿವೃದ್ಧಿ ಕೇವಲ ಬೆಂಗಳೂರಿಗೆ ಸೀಮಿತವಾಗದೆ; ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗಗಳಿಗೂ ಸಮಾನ ಅವಕಾಶಗಳು ಮತ್ತು ಮೂಲಸೌಕರ್ಯಗಳು ದೊರೆಯಬೇಕು ಎಂದು ಒತ್ತಾಯಿಸಿದರು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ, ಉದ್ಯೋಗಾವಕಾಶಗಳು ಹಾಗೂ ವಿಶೇಷ ಯೋಜನೆಗಳನ್ನು ಸರ್ಕಾರ ರೂಪಿಸಬೇಕಿದೆ ಎಂದು ಅವರು ಹೇಳಿದರು.
ರೈತರ ಜಮೀನುಗಳ ಸ್ವಾಧೀನ ಹಾಗೂ ಪ್ರಾದೇಶಿಕ ಅಸಮಾನತೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಶೋಷಿತ ವರ್ಗಗಳಿಗೆ ನ್ಯಾಯ ದೊರೆಯುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದರು. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾರ ಹಾಕುವುದಕ್ಕಿಂತ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದ ಅವರು, ಜಾತಿ ಆಧಾರಿತ ಅಸಮಾನತೆಗಳನ್ನು ನಿವಾರಿಸಿ ಸಿದ್ಧಾಂತ ಆಧಾರಿತ ನಾಯಕತ್ವ ಬೆಳೆಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿಎಸ್ಎಸ್ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Laxmi News 24×7