ಚಿಕ್ಕೋಡಿ(ಬೆಳಗಾವಿ): ಕೊರೊನಾ ಸೋಂಕು ಹರಡದಂತೆ ದೇಶಾದ್ಯಂತ ಲಾಕ್ ಡೌನ್ ಆದೇಶ ಹೇರಲಾಗಿದೆ. ಲಾಕ್‍ಡೌನ್ ಆದೇಶ ಉಲ್ಲಂಘಿಸಿ ರಸ್ತೆಗಿಳಿಯುತ್ತಿರುವ ಜನರಿಗೆ ಪೊಲೀಸರು ಲಾಠಿ ರುಚಿ ಕೂಡ ತೋರಿಸಿದ್ದಾರೆ. ಪೋಲಿಸರ ಲಾಠಿ ಏಟಿಗೂ ಲಾಕ್ ಡೌನ್ ಪಾಲಿಸದ ಜನರಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೀಡಸೊಸಿ ಗ್ರಾಮದ ದುರದುಂಡೇಶ್ವರ ಮಠದ ಸ್ವಾಮಿಜಿ ರಸ್ತೆಗಿಳಿಯದಂತೆ ಜಾಗೃತಿ ಕಾರ್ಯ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೀಡಸೊಸಿ ಗ್ರಾಮದ ದುರದುಂಡೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮಿಜಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದು, ಕೊವಿಡ್ 19 ಕೊರೊನಾ ರೋಗ ತನ್ನ ಕದಂಬ ಬಾಹು ಚಾಚುತ್ತಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಜನರು ಇನ್ನು ಜಾಗೃತರಾಗದ ಹಿನ್ನೆಲೆ ಒಂದೇ ದಿನ ಜನರಿಗೆ ಮಾಸ್ಕ್ ತಯಾರಿಸಲು ಕರೆ ನೀಡಿದ್ದ ಶಿವಲಿಂಗೇಶ್ವರ ಸ್ವಾಮೀಜಿಯವರ ಕರೆಗೆ ಸುಮಾರು ಎರಡು ಸಾವಿರ ಮಾಸ್ಕ್ ಶ್ರೀ ಮಠದಿಂದ ತಯಾರಿಸಲಾಗಿತ್ತು.
ನೀಡಸೊಸಿ ಗ್ರಾಮದ ಮನೆ ಮನೆಗೆ ತೆರಳಿ ಮಾಸ್ಕ್ ವಿತರಿಸಿದ ಸ್ವಾಮೀಜಿ, ಕೊರೊನಾ ರೋಗ ಹರಡುವಿಕೆ ತಡೆಯದಿದ್ದರೆ ಕೊರೊನಾ ಇದ್ದದ್ದು ಮಾರಣ ಆಗುವುದು. ಆದ್ದರಿಂದ ಕೊರೊನಾ ರೋಗ ಹರಡುವಿಕೆ ತಡೆಯಲು ಮನೆಯಿಂದ ಜನರು ಹೊರ ಬರದಂತೆ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮನವಿ ಮಾಡಿಕೊಂಡರು.
ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಯವರ ಒಂದೇ ಒಂದು ಕರೆಗೆ ಒಂದೇ ದಿನದಲ್ಲಿ ಭಕ್ತರು ಎರಡು ಸಾವಿರ ಮಾಸ್ಕ್ ತಯಾರಿಸಿ ಕೊಟ್ಟಿದ್ದಾರೆ. ನಮ್ಮ ಗ್ರಾಮದ ಜನರಿಗೆ ರೋಗ ಹರಡದಂತೆ ಸ್ವಾಮೀಜಿಯವರು ಕಾಳಜಿವಹಿಸಿದ್ದು, ಇಡೀ ಊರಿಗೆ ಮಾಸ್ಕ್ ತಯಾರಿಸಲು ಬಟ್ಟೆ ಕೊಟ್ಟಿದ್ದರು. ಅವರ ಕರೆಗೆ ನಾವು ಬಹಳಷ್ಟು ಸಂತೋಷದಿಂದ ಮಾಸ್ಕ್ ಸಿದ್ಧಪಡಿಸಿದ್ದೇವೆ. ಈ ಮೂಲಕ ರೋಗದ ಜಾಗೃತಿ ಕಾರ್ಯ ಹಾಗೂ ಸೇವೆಗೆ ಅವಕಾಶ ಸಿಕ್ಕಿದೆ ಎಂದು ಭಕ್ತರು ಹೇಳುತ್ತಾರೆ.