ಮುಂಬೈ: ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕೋವಿಡ್-19 ಪಿಡುಗಿನ ಭರಾಟೆ ಜೋರಾಗಿದೆ. ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಹಾಗೂ ಅವರ ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯ ರೈ ಬಚ್ಚನ್ ಮತ್ತು ಮೊಮ್ಮಗಳು ಆರಾಧ್ಯ ಕೂಡ ಕರೊನಾ ಸೋಂಕಿಗೆ ತುತ್ತಾದ ಮೇಲಂತೂ ಬಾಲಿವುಡ್ನ ಮಂದಿಗೆ ಕರೊನಾ ಭಾರಿ ನಡುಕವನ್ನೇ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಸೋಂಕಿನಿಂದ ದೂರವುಳಿಯಲು ಅವರೆಲ್ಲರೂ ವಿವಿಧ ರೀತಿಯ ತಂತ್ರಗಾರಿಕೆಯನ್ನೂ ಅನುಸರಿಸುತ್ತಿದ್ದಾರೆ.
ಇಂತಿಪ್ಪ, ಬಾಲಿವುಡ್ನಲ್ಲಿ ವಿಶಿಷ್ಟ ನಟನೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಶಾರುಖ್ ಖಾನ್ ತಮ್ಮ ನಿವಾಸ ಮನ್ನತ್ಗೆ ಪ್ಲಾಸ್ಟಿಕ್ನ ಹೊದಿಕೆ ಹೊದಿಸಿದ್ದಾರೆ. ಕರೊನಾ ಸೋಂಕಿಗೆ ಹೆದರಿ, ಅದರಿಂದ ರಕ್ಷಣೆ ಪಡೆಯಲು ಬಾಜಿಗಾರ್ ಹೀಗೆ ಮಾಡಿದ್ದಾರೆ ಎಂದೇ ಎಲ್ಲರ ಭಾವನೆಯಾಗಿದೆ.ಆದರೆ ವಾಸ್ತವದಲ್ಲಿ ಮನ್ನತ್ಗೆ ಪ್ಲಾಸ್ಟಿಕ್ ಹೊದಿಕೆ ಹೊದಿಸಲು ಕರೊನಾ ಕಾರಣವಲ್ಲ. ಬದಲಿಗೆ ಮುಂಬೈನ ಮಳೆ ಎಂಬುದು ಈಗ ಸ್ಪಷ್ಟವಾಗಿದೆ. ತಮ್ಮ ಪತ್ನಿ ಗೌರಿ ಖಾನ್ ಮತ್ತು ಪುತ್ರರಾದ ಆರ್ಯನ್, ಅಬ್ರಾಂ ಹಾಗೂ ಪುತ್ರಿ ಸುಹಾನಾ ಜತೆ ಈ ಬಂಗಲೆಯಲ್ಲಿ ವಾಸಿಸುವ ಶಾರುಖ್ ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ತಮ್ಮ ಮನೆಗೆ ಪ್ಲಾಸ್ಟಿಕ್ ಹೊದಿಕೆ ಹೊದಿಸುವುದನ್ನು ರೂಢಿಸಿಕೊಂಡಿದ್ದಾರೆ. ತನ್ಮೂಲಕ ಮಳೆಯಿಂದಾಗಿ ಮನ್ನತ್ಗೆ ಒಂದಿಷ್ಟೂ ತೊಂದರೆಯಾಗದಂತೆ ಮುನ್ನೆಚ್ಚರಿಕೆವಹಿಸುತ್ತಾರೆ ಎಂದು ಮನ್ನತ್ನ ಸುತ್ತಮುತ್ತಲ ನಿವಾಸಿಗಳು ಸ್ಪಷ್ಟಪಡಿಸಿದ್ದಾರೆ.