Home / Uncategorized / ನಾಯಕತ್ವ ಬದಲಾವಣೆ; ಮುಂದುವರಿದ ನಿಗೂಢತೆ : ಜುಲೈ 26ರ ಕೌತುಕ

ನಾಯಕತ್ವ ಬದಲಾವಣೆ; ಮುಂದುವರಿದ ನಿಗೂಢತೆ : ಜುಲೈ 26ರ ಕೌತುಕ

Spread the love

ಬೆಂಗಳೂರು: ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ದಿಲ್ಲಿ ಭೇಟಿಯ ಬಳಿಕ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಅಥವಾ ಮುಂದುವರಿಕೆ ಬಗ್ಗೆ ನಿಗೂಢತೆ ಮುಂದುವರಿದಿದೆ. ಬಿಜೆಪಿಯ ಎರಡೂ ಬಣಗಳಲ್ಲಿ ಜು. 26ರ ಅನಂತರದ ರಾಜಕೀಯ ಲೆಕ್ಕಾಚಾರ ಬಿರುಸಾಗಿ ನಡೆಯುತ್ತಿದೆ.

ಬಿಎಸ್‌ವೈ ಅವರು ಪ್ರಧಾನಿ ಮೋದಿ ಸಹಿತ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮರಳಿದ ಬಳಿಕ ‘ರಾಜೀನಾಮೆ ನೀಡುವುದಿಲ್ಲ, ಹಾಗೆಂದು ಪಕ್ಷದ ನಾಯಕರು ಸೂಚಿಸಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಬಿಜೆಪಿ ವಲಯದಲ್ಲಿ ಮಾತ್ರ ಜು. 26 ಭಾರೀ ಸದ್ದು ಮಾಡುತ್ತಿದೆ. ಆ ಬಳಿಕ ಏನೆಲ್ಲ ಬೆಳವಣಿಗೆ ಆಗಲಿವೆ ಎನ್ನುವ ಬಗ್ಗೆ ಎಲ್ಲರೂ ತಮ್ಮದೇ ಆದ ಲೆಕ್ಕಾಚಾರ ಹಾಕುತ್ತಿದ್ದಾರೆ. ಆದರೆ ಯಡಿಯೂರಪ್ಪ ಮಾತ್ರ ಎಂದಿನಂತೆ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ.

ಪರ್ಯಾಯ ನಾಯಕತ್ವ ?
ಯಡಿಯೂರಪ್ಪ ಹುದ್ದೆಗೆ ರಾಜೀ ನಾಮೆ ಸಲ್ಲಿಸಿದರೆ, ಪರ್ಯಾಯ ನಾಯಕತ್ವದ ಬಗ್ಗೆಯೂ ಬಿರುಸಿನ ಚರ್ಚೆಗಳು ನಡೆಯುತ್ತಿವೆ. ಪಕ್ಷದ ವರಿಷ್ಠರು ಪ್ರಹ್ಲಾದ್‌ ಜೋಶಿ, ಲಕ್ಷ್ಮಣ ಸವದಿ ಮತ್ತು ಮುರುಗೇಶ್‌ ನಿರಾಣಿ ಅವರಲ್ಲಿ ಒಬ್ಬರಿಗೆ ಹುದ್ದೆ ನೀಡುವ ಬಗ್ಗೆ ಆಸಕ್ತಿ ವಹಿಸಿದ್ದಾರೆ ಎಂದು ಭಿನ್ನರ ಮೂಲಗಳು ಹೇಳಿವೆ. ಆದರೆ ವರಿಷ್ಠರು ಬಸವರಾಜ ಬೊಮ್ಮಾಯಿ ಹೆಸರು ಪ್ರಸ್ತಾವಿಸಿದ್ದಾರೆ ಎಂದು ಬಿಎಸ್‌ವೈ ಆಪ್ತ ಮೂಲಗಳು ತಿಳಿಸಿವೆ.

ಆಡಿಯೋ ವೈರಲ್‌
ರವಿವಾರ ರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಅವರದ್ದು ಎನ್ನಲಾದ ಆಡಿಯೋ ಒಂದು ವೈರಲ್‌ ಆಗಿದೆ. ತಮ್ಮ ಆಪ್ತರೊಂದಿಗೆ ಅವರು ತುಳುವಿನಲ್ಲಿ ಮಾತನಾಡಿದ್ದಾರೆ ಎನ್ನಲಾದ ಈ ಆಡಿಯೋದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸುಳಿವು ನೀಡಿದ್ದಾರೆ. ಮೂವರಲ್ಲಿ ಯಾರು ಬೇಕಾದರೂ ಸಿಎಂ ಆಗಬಹುದು. ಶೆಟ್ಟರ್‌ ಮತ್ತು ಈಶ್ವರಪ್ಪ ತಂಡವನ್ನು ತೆಗೆದು ಹೊಸ ತಂಡ ಕಟ್ಟಲಾಗುವುದು ಎಂದು ಈ ಆಡಿಯೋದಲ್ಲಿ ಕೇಳಿಬಂದಿದೆ. ಈ ಆಡಿಯೋ ಬಿಜೆಪಿಯಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಆದರೆ ಆಡಿಯೋದ ಖಚಿತತೆ ಇನ್ನೂ ಸ್ಪಷ್ಟವಾಗಿಲ್ಲ.

ಅವರವರದೇ ಲೆಕ್ಕಾಚಾರ
ಆಗಸ್ಟ್‌ ಮೊದಲ ವಾರದಲ್ಲಿ ಮತ್ತೆ ದಿಲ್ಲಿಗೆ ತೆರಳುವುದಾಗಿ ಬಿಎಸ್‌ವೈ ಹೇಳಿರುವುದು ಶಾಸಕರಲ್ಲಿ ಆಸೆ ಗರಿಗೆದರಿಸಿದೆ. ಕೆಲವು ಹಿರಿಯ ಸಚಿವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ ಎಂಬ ನಿರೀಕ್ಷೆ ಶಾಸಕರದು.

ಆದರೆ ಶೀಘ್ರವೇ ಬೇರೆಯವರಿಗೆ ಅವಕಾಶ ಕಲ್ಪಿಸುವಂತೆ ಯಡಿಯೂರಪ್ಪ ಅವರಿಗೆ ವರಿಷ್ಠರು ಸೂಚನೆ ನೀಡಿದ್ದಾರೆ ಎಂಬ ಲೆಕ್ಕಾಚಾರದಲ್ಲಿ ಭಿನ್ನರಿದ್ದಾರೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು 2 ವರ್ಷಗಳ ಸಂಭ್ರಮ ಆಚರಣೆ ಮುಗಿದ ಕೂಡಲೇ ಯಡಿಯೂರಪ್ಪ ಸ್ಥಾನ ತ್ಯಾಗ ಮಾಡುತ್ತಾರೆ ಎಂಬ ನಿರೀಕ್ಷೆ ಅವರದು.

ಸಿಎಂ ನಿರುಮ್ಮಳ
ಪಕ್ಷದಲ್ಲಿ ಒಳಗೊಳಗೆ ನಾಯಕತ್ವದ ಮುಂದುವರಿಕೆ, ಬದಲಾವಣೆ, ಸಚಿವ ಸಂಪುಟ ಪುನಾರಚನೆಯ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದ್ದರೂ ಯಡಿಯೂರಪ್ಪ ಮಾತ್ರ ತಲೆಕೆಡಿಸಿ ಕೊಳ್ಳದೆ ಎಂದಿನಂತೆ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ರವಿವಾರ ಕೊರೊನಾ ಅನ್‌ಲಾಕ್‌ 4.0 ಬಗ್ಗೆ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅಲ್ಲದೆ ಆಗಸ್ಟ್‌ ಮೊದಲ ವಾರದಲ್ಲಿ ವಿಧಾನಮಂಡಲದ ಅಧಿವೇಶನ ಕರೆಯುವ ಬಗ್ಗೆಯೂ ಆಪ್ತ ಸಚಿವರ ಜತೆಗೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕಾಂಗ ಸಭೆ; ಇಂದು ನಿರ್ಧಾರ
ಜುಲೈ 26ರಂದು ರಾಜ್ಯ ಸರಕಾರಕ್ಕೆ 2 ವರ್ಷಗಳು ತುಂಬುವುದರಿಂದ ಮುಖ್ಯಮಂತ್ರಿ ಜು. 25ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಶಾಸಕರಿಗೆ ಅಧಿಕೃತ ಆಹ್ವಾನ ತಲುಪಿಲ್ಲ ಎನ್ನಲಾಗಿದೆ. ಆ ದಿನ ಸಂಭ್ರಮಾಚರಣೆಗೆ ಸೀಮಿತ ವಾಗಿದ್ದು, ಶಾಸಕರೊಂದಿಗೆ ಸಭೆ ನಡೆಸುವ ಸಾಧ್ಯತೆಯಿಲ್ಲ ಎಂದು ಮುಖ್ಯಮಂತ್ರಿಯವರ ಆಪ್ತ ಮೂಲ ಗಳು ತಿಳಿಸಿವೆ. ಆದರೆ ಜು. 25 ಅಥವಾ 26ರಂದು ಶಾಸಕಾಂಗ ಪಕ್ಷದ ಸಭೆ ನಡೆಯುತ್ತದೆಯೇ ಇಲ್ಲವೇ ಎನ್ನುವ ಬಗ್ಗೆ ಸೋಮವಾರ ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.


Spread the love

About Laxminews 24x7

Check Also

ಮಹಿಳೆ ಮೇಲೆ ಹಲ್ಲೆ ಪ್ರಕರಣ ; ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಸಿಹಿ ತಿನ್ನಿಸಿ ಸ್ವಾಗತ

Spread the loveಬೆಳಗಾವಿ : ಕಳೆದ ಡಿಸೆಂಬರ್ ನಲ್ಲಿ ಬೆಳಗಾವಿ ಹೊರವಲಯದ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ