Breaking News
Home / ರಾಜಕೀಯ / ಹಳ್ಳಿಗಳ ಜನರಿಗೆ ಲಸಿಕೆ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ಪ್ರಿಯಾಂಕ್‌ ಖರ್ಗೆ ಕಿಡಿ

ಹಳ್ಳಿಗಳ ಜನರಿಗೆ ಲಸಿಕೆ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ಪ್ರಿಯಾಂಕ್‌ ಖರ್ಗೆ ಕಿಡಿ

Spread the love

ಕಲಬುರ್ಗಿ: ‘ಜಿಲ್ಲೆಯ ಜನಸಂಖ್ಯೆಯಲ್ಲಿ ಇನ್ನೂ ಕೇವಲ ಶೇ 10ರಷ್ಟು ಮಂದಿಗೆ ಮಾತ್ರ ಕೋವಿಡ್‌ ಲಸಿಕೆ ನೀಡಲಾಗಿದೆ. ಅದರಲ್ಲೂ ಹಳ್ಳಿಗಳ ಜನರಿಗೆ ಲಸಿಕೆ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಕಿಡಿ ಕಾರಿದರು.

‘ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸೇನಾನಿಗಳಿಗೇ ಪೂರ್ಣವಾಗಿ ಲಸಿಕೆ ನೀಡಿಲ್ಲ. ಇನ್ನು ನಾಗರಿಕರಿಗೆ ಯಾವಾಗ ನೀಡುತ್ತಾರೆ? ಲಸಿಕೆ ನೀಡುವಲ್ಲಿ ರಾಜ್ಯ ಸರ್ಕಾರ ಕಲಬುರ್ಗಿ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ತಾಳಿದ್ದೇ ಈ ಹಿನ್ನಡೆಗೆ ಕಾರಣ’ ಎಂದು ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಒಟ್ಟು 27,596 ಆರೋಗ್ಯ ಕಾರ್ಯಕರ್ತರು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 22,893 ಮಂದಿಗೆ ಮಾತ್ರ ಮೊದಲ ಡೋಸ್‌ ನೀಡಲಾಗಿದೆ. 13,882 ಮಂದಿಗೆ ಎರಡನೇ ಡೋಸ್‌ ನೀಡಿದ್ದಾರೆ. ಫ್ರಂಟ್‌ಲೈನ್‌ ವಾರಿಯರ್‌ಗಳ ಸಮಸ್ಯೆ ಇನ್ನೂ ಗಂಭೀರ. ಜೂನ್‌ 16ರವರೆಗೆ ಕೇವಲ 20,590 ಮಂದಿ ನೋಂದಣಿ ಮಾಡಿಸಿದ್ದು, 18,814 ಮಂದಿಗೆ ಲಸಿಕೆ ನೀಡಲಾಗಿದೆ. ಈ ಎರಡೂ ವಿಭಾಗಗಳು ಸೇರಿ ಅರ್ಧದಷ್ಟು ಮಂದಿ ನೋಂದಣಿಯಾಗಿದೆ. ಇನ್ನೂ ಸಾವಿರಾರು ಸಂಖ್ಯೆಯ ವಾರಿಯರ್‌ಗಳು ಹಾಗೇ ಉಳಿದಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿ 16 ಲಕ್ಷಕ್ಕೂ ಹೆಚ್ಚು ವಯಸ್ಕರು ಇದ್ದಾರೆ. ಇದರಲ್ಲಿ ಕೇವಲ 6,54,175 ಮಂದಿ ಮಾತ್ರ ನೋಂದಣಿ ಮಾಡಲಾಗಿದೆ. ಅವರಲ್ಲಿ 3,60,752 ಮಂದಿಗೆ ಲಸಿಕೆ ನೀಡಿದ್ದಾರೆ. ಅಂದರೆ, ನೋಂದಣಿಯಾದ ಶೇ 50ರಷ್ಟು ಮಂದಿಗೆ ಮಾತ್ರ ಲಸಿಕೆ ಸಿಕ್ಕಿದೆ. ಇವರಲ್ಲೂ ಎರಡನೇ ಡೋಸ್‌ ಪಡೆದವರು ಕೇವಲ 64,691 ಮಾತ್ರ. ಆದರೆ, ಲಸಿಕೆಯನ್ನು ಆಂದೋಲನದ ರೀತಿ ನೀಡಲಾಗುತ್ತಿದೆ ಎಂದು ಜನರ ಮುಂದೆ ಸುಳ್ಳು ಹೇಳುತ್ತಿದ್ದಾರೆ’ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ನಗರ ಘಟಕದ ಅಧ್ಯಕ್ಷ ಡಾ.ಕಿರಣ ದೇಸಾಯಿ, ಮುಖಂಡರಾದ ತಿಪ್ಪಣ್ಣಪ್ಪ ಕಮಕನೂರ, ಅಲ್ಲಮಪ್ರಭು ಪಾಟೀಲ ಇದ್ದರು.

ಅಪಾರ ಲಸಿಕೆ ವ್ಯರ್ಥ

‘ಸರಿಯಾದ ಸಮಯಕ್ಕೆ ಚುಚ್ಚುಮದ್ದು ನೀಡಲಾಗದ ಕಾರಣಕ್ಕೆ 2,207 ಕೋವ್ಯಾಕ್ಸಿನ್‌ ಹಾಗೂ 13,870 ಕೋವಿಶೀಲ್ಡ್‌ ಹಾಳಾಗಿವೆ ಎಂದು ಸರ್ಕಾರ ಮಾಹಿತಿ ನೀಡಿದೆ. ಹಳ್ಳಿಗಳಲ್ಲಿ ಹೋಗಿ ಲಸಿಕೆ ನೀಡುವ ಯೋಗ್ಯತೆ ಇಲ್ಲದ ಇವರು, ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುತ್ತಾರೆ’ ಎಂದು ಮುಖಂಡ ಡಾ.ಶರಣಪ್ರಕಾಶ ಪಾಟೀಲ ಕಿಡಿ ಕಾಡಿದರು.

‘ಆರಂಭದಲ್ಲಿ ಲಸಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯೇ ನಿರ್ಲಕ್ಷ್ಯ ವಹಿಸಿದರು. ಜನಸಂಖ್ಯೆಗೆ ತಕ್ಕಂತೆ ‘ಆರ್ಡರ್‌’ ಹಾಕದ ಕಾರಣ ಇಂದು ಕೊರತೆ ಎದುರಿಸುವಂತಾಗಿದೆ. ಇದೆ ಕಾರಣಕ್ಕೆ ಹರೆಯದ ವಯಸ್ಸಿನಲ್ಲಿಯೇ ಹಲವರು ಪ್ರಾಣ ಕಳೆದುಕೊಂಡರು. ಈ ಸಾವುಗಳಿಗೆ ಪ್ರಧಾನಿ ಮೋದಿಯೇ ನೆರ ಹೊಣೆ’ ಎಂದು ಆರೋಪಿಸಿದರು.

‘ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದ ಮೇಲೆ ಉಚಿತ ಲಸಿಕೆ ನೀಡುವುದಾಗಿ ಹೇಳಿದ್ದಾರೆ. ಆದರೆ, ಬಿಜೆಪಿಯವರು ಇದನ್ನು ಕೂಡ ಮೋದಿ ಅವರ ದೊಡ್ಡತನ ಎಂದು ಪ್ರಚಾರ ಪಡೆಯುತ್ತಿರುವುದು ನಾಚಿಕೆಗೇಡು’ ಎಂದು ಟೀಕಿಸಿದರು.


Spread the love

About Laxminews 24x7

Check Also

ಬೆಳಗಾವಿ ಲೋಕಸಭಾ ಚುನಾವಣೆಗೆ ಒಪ್ತಾರಾ ಯತ್ನಾಳ್? ಏನು ಬಿಎಲ್ ಸಂತೋಷ್ ತಂತ್ರಗಾರಿಕೆ?

Spread the loveಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಬೆಳಗಾವಿಯ ಬಿಜೆಪಿ ಅಭ್ಯರ್ಥಿ (Belagavi …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ