ಮೈಸೂರು ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಮಹಿಳೆಯರಿಬ್ಬರು ಸಾವು
ಮೈಸೂರು: ಅರಮನೆಯ ಬಳಿ ಹೀಲಿಯಂ ತುಂಬಿದ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೆ ಏರಿದೆ.
ನಂಜನಗೂಡಿನ ಚಾಮಲಾಪುರದ ಮಂಜುಳಾ ಹಾಗೂ ಬೆಂಗಳೂರು ಮೂಲದ ಲಕ್ಷ್ಮಿ (29) ಮೃತ ಮಹಿಳೆಯರು. ಗುರುವಾರ (ಡಿ.25) ರಾತ್ರಿ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಬಲೂನ್ಗೆ ಹೀಲಿಯಂ ತುಂಬುತ್ತಿದ್ದ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ದುರ್ಘಟನೆ ಸಂಭವಿಸಿತ್ತು.
ಘಟನೆಯಲ್ಲಿ, ಸಲೀಂ ಎಂಬವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಂಜುಳಾ ಹಾಗೂ ಲಕ್ಷ್ಮಿ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇವರಿಬ್ಬರೂ ಶನಿವಾರ ಸಾವನ್ನಪ್ಪಿದ್ದಾರೆ.
ಲಕ್ಷ್ಮಿ ಅವರ ಪತಿ ರಾಜೇಶ್ ಅವರು ಮೂಲತಃ ಮಂಡ್ಯದ ಹೊಸಹಳ್ಳಿ ಗ್ರಾಮದ ನಿವಾಸಿ. ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಮಕ್ಕಳಿಗೆ ರಜೆ ಇದ್ದ ಹಿನ್ನೆಲೆಯಲ್ಲಿ, ಗುರುವಾರ ಮೈಸೂರಿನ ಬೆಳವಾಡಿಯ ಸಂಬಂಧಿಕರ ಮನೆಗೆ ಬಂದಿದ್ದರು. ಅರಮನೆ ನೋಡಲು ಹೋದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಹೀಲಿಯಂ ಸಿಲಿಂಡರ್ ಸ್ಪೋಟದಿಂದಾಗಿ ಲಕ್ಷ್ಮಿ ಅವರು ಗಂಭೀರ ಗಾಯಗೊಂಡಿದ್ದರು.
Laxmi News 24×7