ಬೆಂಗಳೂರು: ಶುಕ್ರವಾರವೊಂದರ ಬೆಳಗ್ಗೆ ನಿಗದಿಯಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಬದಲಾವಣೆ ಮಾಡಿದ ಕ್ರಮವನ್ನು ಪ್ರಶ್ನಿಸಿ, ನಮಾಜ್ ಮಾಡುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಕ್ಸ್ ಪೋಸ್ಟ್ ಮಾಡುವ ಮೂಲಕ ಎರಡು ವರ್ಗಗಳ ನಡುವೆ ಕೋಮುದ್ವೇಷ ಹರಡಲು ಪ್ರಯತ್ನಿಸಿದ್ದ ಆರೋಪದಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.
ಈ ಸಂಬಂಧ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಪ್ರಶ್ನಿಸಿ, ಮಿಥುನ್ ಚಕ್ರವರ್ತಿ ಅಲಿಯಾಸ್ ಚಕ್ರವರ್ತಿ ಸೂಲಿಬೆಲೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠ, ಪ್ರಕರಣಕ್ಕೆ ತಡೆ ನೀಡಿ ಆದೇಶಿಸಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಎಲ್ಲಾ ಪರೀಕ್ಷೆಗಳನ್ನು ಬೆಳಗ್ಗೆ ನಿಗದಿ ಮಾಡಲಾಗಿದೆ. ಶುಕ್ರವಾರ ಏಕೆ? ಓಹ್.. ನಮಾಜ್‌ಗೆ ಸಮಯ ಎಂದು ಸೂಲಿಬೆಲೆ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಕೋಮುದ್ವೇಷ ಏನಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟ ನ್ಯಾಯಪೀಠ, ಪ್ರಕರಣಕ್ಕೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ. ಜೊತೆಗೆ, ಪ್ರಕರಣ ಸಂಬಂಧ ರಾಜ್ಯ ಸರ್ಕಾರವು ಆಕ್ಷೇಪಣೆ ಸಲ್ಲಿಸಲು ಮತ್ತು ಮಧ್ಯಂತರ ತಡೆ ತೆರವು ಕೋರುವ ಸ್ವಾತಂತ್ರ್ಯ ಹೊಂದಿದೆ ಎಂದು ಆದೇಶಿಸಿತು.
ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು, ”ಐಪಿಸಿ ಸೆಕ್ಷನ್ 505ರ ಅಡಿ ಆರೋಪ ಮಾಡಲಾಗಿದೆ. ಆದರೆ, ಸೂಕ್ತ (ಮ್ಯಾಜಿಸ್ಟ್ರೇಟ್) ಅನುಮತಿ ಪಡೆದಿರುವ ದಾಖಲೆ ಸಲ್ಲಿಸಲಾಗಿಲ್ಲ. ಸಂಜ್ಞೇ ತೆಗೆದುಕೊಂಡಿರುವ ಆದೇಶ ಊರ್ಜಿತವಾಗಲ್ಲ” ಎಂದು ಪೀಠಕ್ಕೆ ತಿಳಿಸಿದರು.
Laxmi News 24×7