ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೀಡಿ ಹಾಗೂ ಸಿಗರೇಟ್ ಮಾರಾಟಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ, ನಾಲ್ಕು ದಿನಗಳಿಂದ ಕೈದಿಗಳು ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ಪ್ರತಿಭಟನೆ ನಿಲ್ಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜೈಲಾಧಿಕಾರಿಗಳು ನೀಡಿದ ಎಚ್ಚರಿಕೆಯು ಕೈದಿಗಳ ಪ್ರತಿಭಟನೆ ತಣ್ಣಗಾಗುವಂತೆ ಮಾಡಿದೆ.
ಜೈಲಿನ ನೂತನ ಮುಖ್ಯ ಜೈಲು ಅಧೀಕ್ಷಕರಾಗಿ ನೇಮಕಗೊಂಡಿರುವ ಐಪಿಎಸ್ ಅಧಿಕಾರಿ ಅಂಶುಕುಮಾರ್ ನೇತೃತ್ವದ ತಂಡ ನಿರಂತರ ಶೋಧ ನಡೆಸಿ, ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಿತ್ತು. ಅವ್ಯಾಹತವಾಗಿ ಬಳಕೆಯಾಗುತ್ತಿದ್ದ ಮೊಬೈಲ್ಗಳು, ಬೀಡಿ ಹಾಗೂ ಸಿಗರೇಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ಕಾರ್ಯಾಚರಣೆಯು ಕೈದಿಗಳಿಗೆ ನುಂಗಲಾರದ ತುತ್ತಾಗಿತ್ತು. ಇದರಿಂದ ಅಸಮಾಧಾನಗೊಂಡು ಜೈಲಿನೊಳಗೆ ಬಂಧಿಗಳು ಪ್ರತಿಭಟನೆ ಕೈಗೊಂಡಿದ್ದರು. ಕನಿಷ್ಠ ಪಕ್ಷ ಬೀಡಿ ಹಾಗೂ ಸಿಗರೇಟ್ ಮಾರಾಟಕ್ಕೆ ಅವಕಾಶ ಕೊಡಬೇಕೆಂದು ಒತ್ತಾಯಿಸಿದ್ದರು.
ಕೈದಿಗಳೊಂದಿಗೆ ಜೈಲು ಅಧೀಕ್ಷಕರ ಮಾತುಕತೆ: ಜೈಲಿನ ನಿಯಾಮವಳಿಯಂತೆ, ಕಾರಾಗೃಹದಲ್ಲಿ ಬೀಡಿ, ಸಿಗರೇಟ್ ಮಾರಾಟ ಮಾಡುವಂತಿಲ್ಲ ಎಂದು ತಿಳಿಹೇಳಿದರೂ ಪಟ್ಟುಬಿಡದೆ ಕೈದಿಗಳು ಪ್ರತಿಭಟನೆ ಮುಂದುವರೆಸಿದ್ದರು. ಮಂಗಳವಾರ ಅಂಶುಕುಮಾರ್ ತೆರಳಿ ಪ್ರತಿಭಟನಾ ಕೈದಿಗಳೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಅದು ವಿಫಲವಾದ ಹಿನ್ನೆಲೆಯಲ್ಲಿ, ಪ್ರತಿಭಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದರು. ಇದರಿಂದ ಕಂಗೆಟ್ಟ ಕೈದಿಗಳು ಪ್ರತಿಭಟನೆ ಹಿಂಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಬೈಲ್ ಫೋನ್, ನಗದು ಪತ್ತೆ: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೆಲ ಕೈದಿಗಳಿಗೆ ವಿಶೇಷ ಆತಿಥ್ಯ ದೊರೆಯುತ್ತಿರುವ ವಿಡಿಯೋಗಳು ವೈರಲ್ ಆದ ಬಳಿಕ ಜೈಲಾಧಿಕಾರಿಗಳು ಇತ್ತೀಚೆಗೆ ಮತ್ತೊಮ್ಮೆ ತಪಾಸಣೆ ನಡೆಸಿದ್ದರು. ಈ ವೇಳೆ ಕೆಲ ಕೈದಿಗಳ ಬಳಿಯಿದ್ದ ಮೊಬೈಲ್ ಫೋನ್, ನಗದು, ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನ ವಶಕ್ಕೆ ಪಡೆಯಲಾಗಿತ್ತು.
ತಪಾಸಣೆ ವೇಳೆ 33 ಮೊಬೈಲ್ ಫೋನ್‌ಗಳು, 22 ಸಂಖ್ಯೆ ಸಿಮ್ ಕಾರ್ಡ್‌ಗಳು, 5 ಸಂಖ್ಯೆ ಚಾರ್ಜರ್‌ಗಳು, 4 ಇಯರ್ ಬಡ್ಸ್, 49 ಸಾವಿರ ರೂಪಾಯಿ ನಗದು, 1 ಇಯರ್ ಫೋನ್, 3 ಚಾಕು ತರಹದ ವಸ್ತುಗಳು ದೊರೆತಿದ್ದವು. ಕಾರಾಗೃಹದೊಳಗೆ ನಿಷೇಧಿಸಲ್ಪಟ್ಟಿದ್ದರೂ ಅವುಗಳನ್ನು ಸಾಗಿಸಿದವರು, ಸಹಕರಿಸಿದವರ ವಿರುದ್ಧ ರಾಜ್ಯ ಕಾರಾಗೃಹ (ತಿದ್ದುಪಡಿ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಜರುಗಿಸುವಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಜೈಲಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದರು.
Laxmi News 24×7