ಬೆಂಗಳೂರು: ಅಗತ್ಯ ಬಿದ್ದರೆ ನಮ್ಮ ಮನೆಗೂ ಬ್ರೇಕ್ ಫಾಸ್ಟ್ಗೆ ಕರೆಯುತ್ತೇನೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ. ಸದಾಶಿವನಗರ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಮನೆಯಲ್ಲಿ ಸಿಎಂ ಬ್ರೇಕ್ ಫಾಸ್ಟ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪಕ್ಷದಲ್ಲಿ ಎಲ್ಲವೂ ತಿಳಿಯಾಗಿದೆ. ಈಗ ಸಂತೋಷದ ವಾತಾವರಣವಿದೆ. ಸಿಎಂ-ಡಿಸಿಎಂ ಎರಡನೇ ಬ್ರೇಕ್ ಫಾಸ್ಟ್ಗೂ ನನ್ನನ್ನು ಕರೆದಿಲ್ಲ. ಸದ್ಯಕ್ಕೆ ಅವರು ಇಬ್ಬರೇ ತಿಂಡಿ ತಿನ್ನುತ್ತಿದ್ದಾರೆ. ನಮ್ಮನ್ನೂ ಕರೆದರೆ ನಾವೂ ತಿಂಡಿ ತಿನ್ನಲು ಹೋಗುತ್ತೇವೆ. ಅಗತ್ಯ ಬಿದ್ದರೆ ನಮ್ಮ ಮನೆಗೂ ಬ್ರೇಕ್ ಫಾಸ್ಟ್ಗೆ ಕರೆಯುತ್ತೇನೆ. ಸಿಎಂ-ಡಿಸಿಎಂ ಇಬ್ಬರನ್ನೂ ನನ್ನ ಮನೆಗೂ ಬ್ರೇಕ್ ಫಾಸ್ಟ್ಗೆ ಯಾಕೆ ಕರೆಯಬಾರದು ಎಂದು ಪರಮೇಶ್ವರ್ ಪ್ರಶ್ನಿಸಿದರು.
ಸಚಿವ ಜಿ.ಪರಮೇಶ್ವರ್ ಸಿಎಂ ಆಗಲಿ ಎಂದು ಅಭಿಮಾನಿಗಳಿಂದ ಕೇಳಿ ಬರುತ್ತಿರುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಎಲ್ಲಾ ನಾಯಕರ ಅಭಿಮಾನಿಗಳಿಗೆ ತಮ್ಮ ನಾಯಕ ಮುಖ್ಯಮಂತ್ರಿ ಆಗಲಿ ಅಂತ ಇರುತ್ತದೆ. ನನ್ನ ಅಭಿಮಾನಿಗಳಲ್ಲೂ ಆಸೆ ಇರುತ್ತದೆ ಎಂದರು.
ಕೆಲವರಿಗೆ ಸಿದ್ದರಾಮಯ್ಯ ಮುಂದುವರಿಯಲಿ ಅಂತ ಇದೆ. ಇನ್ನು ಕೆಲವರಿಗೆ ಡಿಸಿಎಂ ಶಿವಕುಮಾರ್ ಸಿಎಂ ಆಗಲಿ ಅಂತ ಇದೆ. ಕೆಲವರಿಗೆ ಪರಮೇಶ್ವರ್ ಸಿಎಂ ಆಗಲಿ ಅಂತ ಇದೆ. ಇದೆಲ್ಲಾ ಜನರ ಅಭಿಲಾಷೆ. ಅದನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ. ನಮ್ಮ ಹೈಕಮಾಂಡ್ ಏನು ನಿರ್ಧಾರ ಮಾಡುತ್ತೆ ಅದೇ ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಅವರಿಬ್ಬರೇ ಬ್ರೇಕ್ ಫಾಸ್ಟ್ ಮಾಡುತ್ತಿದ್ದಾರೆ. ನಮಗೆ ಬ್ರೇಕ್ ಫಾಸ್ಟ್ನೂ ಇಲ್ಲ, ಏನೂ ಇಲ್ಲ. ಅವರೇನು ನಮ್ಮನ್ಜು ಕರೆದಿಲ್ಲ ಎಂದು ಸಚಿವ ಜಿ.ಪರಮೇಶ್ವರ್ ಕಳೆದ ವಾರದ ಸಿಎಂ – ಡಿಸಿಎಂ ಬ್ರೇಕ್ ಫಾಸ್ಟ್ ಬಗ್ಗೆ ಹೇಳಿಕೆ ನೀಡಿದ್ದರು. ಇದೀಗ ಮತ್ತೊಂದು ಸಿಎಂ – ಡಿಸಿಎಂ ಉಪಹಾರ ಸಂಬಂಧ ಪ್ರತಿಕ್ರಿಯಿಸುತ್ತಾ ಎರಡನೇ ಬ್ರೇಕ್ ಫಾಸ್ಟ್ಗೂ ನಮ್ಮನ್ನು ಕರೆದಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು.
Laxmi News 24×7