ಬೆಂಗಳೂರು: ಅಕ್ರಮವಾಗಿ ದನ ಸಾಗಿಸುತ್ತಿದ್ದ ವಾಹನ ಜಪ್ತಿ ಮಾಡಿದ್ದವರ ಬಿಡುಗಡೆಗೆ ಆಗ್ರಹಿಸಿ ಒಂದು ಕೋಮಿನ ಜನ ಅಕ್ರಮ ಕೂಟ ನಿರ್ಮಿಸಿ ಕಲಬುರಗಿಯ ಚಿತ್ತಾಪುರ ಪೊಲೀಸ್ ಠಾಣೆ ಮುಂದೆ ಗುಂಪುಗಟ್ಟಿದ್ದ ಆರೋಪ ಸಂಬಂಧ ದಾಖಲಾದ ಪ್ರಕರಣ ಹಿಂಪಡೆಯಲು ಅನುಮತಿ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಪ್ರಕರಣ ಹಿಂಪಡೆಯಲು ಅನುಮತಿಸಿ ನೀಡಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ರದ್ದು ಕೋರಿ ಬೆಂಗಳೂರಿನ ವಕೀಲ ಗಿರೀಶ್ ಭಾರದ್ವಾಜ್ ಸಲ್ಲಿಸಿರುವ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಹಾಲಿ ಪ್ರಕರಣದ ವಿಚಾರಣೆ ಮುಂದುವರೆಸಲು ಸೂಕ್ತವಾಗಿದೆ ಎಂದು ಅಭಿಯೋಜನಾ ಮತ್ತು ಸರ್ಕಾರಿ ವ್ಯಾಜ್ಯ ಇಲಾಖೆಯ ಉಪ ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ. 2025ರ ಸೆಪ್ಟೆಂಬರ್ 17ರಂದು ಸಂಪುಟ ಮತ್ತು ಇತರ ಇಲಾಖೆಗಳ ಅಭಿಪ್ರಾಯವನ್ನು ಆಧರಿಸಿ ಗೃಹ ಇಲಾಖೆ ಅಭಿಯೋಜನಾ ಮತ್ತು ಪೊಲೀಸ್ ಇಲಾಖೆಗೆ ಚಿತ್ತಾಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸೇರಿ ಒಟ್ಟು 62 ಪ್ರಕರಣಗಳನ್ನು ಹಿಂಪಡೆಯಲು ಆದೇಶಿಸಿತ್ತು. ಇದರ ಅನ್ವಯ ಅಕ್ಟೋಬರ್ 10ರಂದು ಸರ್ಕಾರಿ ಅಭಿಯೋಜಕರು ಚಿತ್ತಾಪುರ ಠಾಣೆಯಲ್ಲಿ ದಾಖಲಾಗಿದ್ದ ಗೋವು ಸಾಗಣೆ ವಾಹನ ಜಪ್ತಿ ಸಂಬಂಧಿತ ಪ್ರಕರಣ ಹಿಂಪಡೆಯಲು ಸಿಆರ್‌ಪಿಸಿ ಸೆಕ್ಷನ್ 321ರ ಅಡಿ ವಿಚಾರಣಾಧೀನ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿ, ಆರೋಪ ಪಟ್ಟಿ ಮುಕ್ತಾಯವಾಗಿದೆ ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ ಎಂದು ಪೀಠಕ್ಕೆ ತಿಳಿಸಿದರು.
ಅಲ್ಲದೇ, ಸುಪ್ರಿಂಕೋರ್ಟ್ ತೀರ್ಪು ಉಲ್ಲಂಘಿಸಿ 2025ರ ಸೆಪ್ಟೆಂಬರ್ 4ರಂದು ಚಿತ್ತಾಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಿಂಪಡೆಯಲು ಸಂಪುಟದ ಮುಂದೆ ಪ್ರಸ್ತಾವ ಮಂಡಿಸಲಾಗಿತ್ತು. ಅಭಿಯೋಜನಾ ಇಲಾಖೆಯ ಭಿನ್ನ ಅಭಿಪ್ರಾಯದ ಹೊರತಾಗಿಯೂ ಪ್ರಕರಣ ಹಿಂಪಡೆಯಲು ಶಿಫಾರಸು ಮಾಡಲಾಗಿದೆ ಎಂದು ಪೀಠಕ್ಕೆ ಮನವರಿಕೆ ಮಾಡಿದರು.
Laxmi News 24×7