ದಾವಣಗೆರೆ: ಅಪರಿಚಿತರನ್ನು ನಂಬಬೇಡಿ, ಒಂಟಿ ಮನೆ ಇದ್ದರೆ ಸಿಸಿ ಕ್ಯಾಮರಾ ಅಳವಡಿಕೆ ಮಾಡಿ ಎಂದು ಪೊಲೀಸರು ಮನವಿ ಮಾಡಿ ಜಾಗೃತಿ ಮೂಡಿಸಿದ್ರು, ಸುರಕ್ಷತೆ ಬಗ್ಗೆ ಜನರು ಜಾಗೃತರಾಗುತ್ತಿಲ್ಲ. ನಿರ್ಲಕ್ಷ್ಯ ವಹಿಸಿ ಅವರ ಪ್ರಾಣಕ್ಕೆ ಅಪಾಯ ತಂದೊಡ್ಡಿಕೊಳ್ಳುತ್ತಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಒಂಟಿಮನೆಗಳನ್ನೇ ದರೋಡೆಕೋರರು ಟಾರ್ಗೆಟ್ ಮಾಡುತ್ತಿದ್ದು, ಈ ಪ್ರಕರಣಗಳು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿವೆ.
ದಾವಣಗೆರೆ ತಾಲೂಕಿನ ಕಾರಿನಗೂರು ಕ್ರಾಸ್ ಬಳಿ ಇರುವ ಒಂಟಿ ಮನೆಯಲ್ಲಿ ದರೋಡೆ ನಡೆದಿದೆ. ಗ್ರಾಮದ ಬೆಸ್ಕಾಂ ನಿವೃತ್ತ ಇಂಜಿನಿಯರ್ ಉಮಾಪತಿ ಅವರ ಪತ್ನಿ ವೀರಮ್ಮ ದಂಪತಿ ಕಾರಿಗನೂರು ಕ್ರಾಸ್ ಬಳಿ ಇರುವ ಜಮೀನಿನಲ್ಲಿ ಒಂಟಿ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮನೆ ಯಜಮಾನ ಉಮಾಪತಿ ಎಂದಿನಂತೆ ಬೆಳಗ್ಗೆ ತೋಟಕ್ಕೆ ಔಷಧಿ ಸಿಂಪಡಿಸಲು ಹೋದಾಗ ಬೆಳಗ್ಗೆ 9 ರಿಂದ 11 ಗಂಟೆ ಸುಮಾರಿಗೆ ದರೋಡೆಕೋರರು ಮನೆಗೆ ನುಗ್ಗಿ ಒಂಟಿಯಾಗಿದ್ದ ವೀರಮ್ಮಳ ಮೇಲೆ ಹಲ್ಲೆ ಮಾಡಿದ್ದು, ಇದರಿಂದಾಗಿ ವೀರಮ್ಮ ಮೂರ್ಚೆ ಹೋಗಿದ್ದರು. ಆಗ ದರೋಡೆಕೋರರು ಬೀರುವಿನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನದ ಮಾಂಗಲ್ಯ ಸರ, ಬಳೆಗಳು, ಉಂಗುರ, ನೆಕ್ಲೇಸ್ ದೋಚಿಕೊಂಡು ಪರಾರಿಯಾಗಿದ್ದಾರೆ. ಮನೆ ಯಜಮಾನ ಜಮೀನಿನಿಂದ ಮನೆಗೆ ಹಿಂದಿರುಗಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7