ಬೆಂಗಳೂರು: ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಒಬ್ಬರ ಮೇಲೆ ಕಿಡಿಗೇಡಿಗಳು ಡ್ಯಾಗರ್‌ನಿಂದ ಹಲ್ಲೆಗೈದಿರುವ ಘಟನೆ ಚಾಮರಾಜಪೇಟೆಯ ವಾಲ್ಮೀಕಿನಗರದ 2ನೇ ಮುಖ್ಯರಸ್ತೆಯಲ್ಲಿ ನಡೆದಿದೆ.
ಜುಲೈ 26ರಂದು ರಾತ್ರಿ 9:30ರ ಸುಮಾರಿಗೆ ಘಟನೆ ನಡೆದಿದೆ. ಹೆಡ್ ಕಾನ್ಸ್‌ಟೇಬಲ್ ಸಂತೋಷ್ ಅವರ ಎಡಗೈಗೆ ಗಂಭೀರ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಠಾಣೆ ಪೊಲೀಸರು ತಬ್ರೇಜ್, ಅಬ್ರೇಜ್, ಸಲ್ಮಾನ್ ಪಾಶಾ ಹಾಗೂ ಓರ್ವ ಅಪ್ರಾಪ್ತನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಮದ್ಯದ ನಶೆಯಲ್ಲಿ ಹಲ್ಲೆ: ಪಾನಮತ್ತ ಆರೋಪಿಗಳು ರಸ್ತೆಯಲ್ಲಿ ಗಲಾಟೆ ಮಾಡಿಕೊಳ್ಳುತ್ತಿರುವಾಗ ಗಸ್ತು ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್‌ಟೇಬಲ್ ಸಂತೋಷ್ ಗಮನಿಸಿದ್ದರು. ಜಗಳ ಬಿಡಿಸಲು ಹೋದಾಗ ಆರೋಪಿಗಳು ಸಂತೋಷ್ ಹಾಗೂ ಮತ್ತೋರ್ವ ಸ್ಥಳೀಯ ವ್ಯಕ್ತಿ ಮೊಹಮ್ಮದ್ ಶಫೀವುಲ್ಲಾ ಮೇಲೆ ಡ್ಯಾಗರ್‌ನಿಂದ ಹಲ್ಲೆಗೈದಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದರು. ಘಟನೆಯಲ್ಲಿ ಸಂತೋಷ್ ಅವರ ಎಡಗೈಗೆ ಗಂಭೀರವಾದ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7