ದಾವಣಗೆರೆ: ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ಖಾಸಗಿ ಕಂಪನಿ ಉದ್ಯೋಗಿಗೆ 10.64 ಲಕ್ಷ ರೂಪಾಯಿ ವಂಚಿಸಿರುವ ಘಟನೆ 2022ರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಭರುಣೇಂದ್ರ, ಗೌರವ ಚೌದ್ರಿ ಮತ್ತು ಉಮೇಶ್ ಎಂಬುವರ ವಿರುದ್ಧ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರಕಾಶ್ ಎಂಬವರು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ: ಪಿಜೆ ಬಡಾವಣೆ ನಿವಾಸಿ ಆಗಿರುವ ಪ್ರಕಾಶ್, ತಮ್ಮ ಸಂಬಂಧಿಕರೊಬ್ಬರ ಪುತ್ರನನ್ನು ಎಂಬಿಬಿಎಸ್‌ಗೆ ಸೇರಿಸಬೇಕೆಂದುಕೊಂಡಿರುವುದಾಗಿ ಸ್ನೇಹಿತರೊಬ್ಬರ ಬಳಿ ಹೇಳಿಕೊಂಡಿದ್ದರು. ಇದಕ್ಕೆ ಸ್ನೇಹಿತ, ಮೆಡಿಕಲ್ ಸೀಟು ಕೊಡಿಸುವವರ ಪರಿಚಯವಿದೆ ಎಂದು ಹೇಳಿ ಭರುಣೇಂದ್ರ ಎಂಬವರ ದೂರವಾಣಿ ಸಂಖ್ಯೆ ನೀಡಿದ್ದರು.
ಬಳಿಕ ಪ್ರಕಾಶ್, ಆರೋಪಿ ಭರುಣೇಂದ್ರನನ್ನು ಸಂಪರ್ಕಿಸಿ ಸಂಬಂಧಿಕರ ಮಗನಿಗೆ ಮೆಡಿಕಲ್ ಸೀಟು ಕೊಡಿಸುವಂತೆ ಕೇಳಿದ್ದರು. ಇದಕ್ಕೆ ಭರುಣೇಂದ್ರ ನಿಮ್ಮ ಮಗನಿಗೂ ಸೀಟು ಕೊಡಿಸುತ್ತೇನೆ ಎಂದು ಹೇಳಿದ್ದ. ನಂತರ ಭರುಣೇಂದ್ರ, ಗೌರವ ಚೌದ್ರಿ ಮತ್ತು ಉಮೇಶ್ ಎಂಬುವರು ಪ್ರಕಾಶ್ ಅವರಿಗೆ ಪದೇ ಪದೇ ಕರೆ ಮಾಡಿ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿದ್ದರು. ಇದನ್ನು ನಂಬಿದ ಪ್ರಕಾಶ್, ಆರೋಪಿಗಳು ನೀಡಿದ್ದ ಬ್ಯಾಂಕ್ ಖಾತೆಗೆ 10,64,000 ರೂಪಾಯಿ ಹಣ ವರ್ಗಾವಣೆ ಮಾಡಿದ್ದರು.
2025ರ ಮಾರ್ಚ್‌ನಲ್ಲಿ ಪ್ರಕಾಶ್, ಭರುಣೇಂದ್ರನನ್ನು ವಿಚಾರಿಸಿದಾಗ ನೀವು ಕೊಟ್ಟ ಹಣವನ್ನು ಕಾಲೇಜಿಗೆ ಕಟ್ಟಿದ್ದೇವೆ. ಆ ಕಾಲೇಜಿನವರು ಈಗ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದ. ಕೆಲ ದಿನಗಳ ನಂತರ ಕರೆ ಮಾಡಿದರೆ ಆರೋಪಿಯ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಇದರಿಂದ ತಾನು ವಂಚನೆಗೊಳಾಗಿರುವುದನ್ನು ಅರಿತ ಪ್ರಕಾಶ್ ಜೂ.17 ರಂದು ಆರೋಪಿಗಳ ವಿರುದ್ಧ ದೂರು ನೀಡಿದ್ದರು.
ಸಚಿವರಿಂದ ಎಚ್ಚರಿಕೆ: ಅತ್ಯುತ್ತಮವಾಗಿ ಓದಿ, ಪರೀಕ್ಷೆ ಬರೆದಿರುವ ಆಕಾಂಕ್ಷಿಗಳು, ಸೀಟು ಪಡೆಯಲೇಬೇಕು ಎಂಬ ಆತುರದಲ್ಲಿ ಮೋಸದ ಜಾಲಕ್ಕೆ ಬೀಳಬಾರದು ಎಂದು ಇತ್ತೀಚಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಎಚ್ಚರಿಕೆ ನೀಡಿದ್ದರು.