ಹಾವೇರಿ: ತಾಯಿ ಜೀವಂತವಿರುವಾಗಲೇ ಮಗನೋರ್ವ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿರುವ ಪ್ರಕರಣ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ವರದಿಯಾಗಿದೆ.
ಶಿಗ್ಗಾಂವಿಯ ಖಾಜೇಖಾನ್ ಗಲ್ಲಿಯ ಶೌಕತ್ ಅಲಿ (39) ಜೀವಂತವಿರುವ ತಾಯಿಯ ಮರಣಪತ್ರ ಸೃಷ್ಟಿಸಿರುವ ಆರೋಪಿಯಾಗಿದ್ದಾನೆ. 60 ವರ್ಷದ ವಯೋವೃದ್ಧೆ ಹೂರಾಂಬಿ ಮುಲ್ಕಿ ಎಂಬವರು ಒಂಟಿಯಾಗಿ ಪಟ್ಟಣದಲ್ಲಿ ಜೀವನ ನಡೆಸುತ್ತಿದ್ದಾರೆ. ಅವರ ಮಗ ಶೌಕತ್ ತಾಯಿಯನ್ನು ತೊರೆದು ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾನೆ. ಸುಮಾರು 2 ಎಕರೆ ಜಮೀನು ಹೂರಾಂಬಿ ಹಾಗೂ ಪುತ್ರನ ಜಂಟಿ ಖಾತೆಯಲ್ಲಿತ್ತು.
ಈ ಜಮೀನು ಕಬಳಿಸಲು ಹುನ್ನಾರ ನಡೆಸಿರುವ ಶೌಕತ್ ಅಲಿ ತನ್ನ ತಾಯಿಯ ಮರಣ ಪ್ರಮಾಣ ಪತ್ರ ಸೃಷ್ಟಿಸಿದ್ದಾನೆ. ವಿಷಯ ತಿಳಿದು ತಾಯಿ ಹೂರಾಂಬಿ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಮಗ ಶೌಕತ್ ಅಲಿಯನ್ನು ವಶಕ್ಕೆ ಪಡೆದಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಡಿಒ ಅಮಾನತು: ಕರ್ತವ್ಯದ ಕೇಂದ್ರ ಸ್ಥಾನದಲ್ಲಿ ಇರದಿದ್ದಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು(ಪಿಡಿಒ) ಸೇವೆಯಿಂದ ಅಮಾನತು ಮಾಡಿದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕು ಮೆಡ್ಲೇರಿ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ. ಕೇಂದ್ರ ಸ್ಥಾನದಲ್ಲಿರದೇ ಕರ್ತವ್ಯ ಲೋಪ ಎಸಗಿದ್ದ ಆರೋಪದ ಮೇಲೆ ಪಿಡಿಒ ರವಿಕುಮಾರ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಸಿಇಒ ರುಚಿ ಬಿಂದಾಲ್ ಆದೇಶ ಹೊರಡಿಸಿದ್ದಾರೆ.
ಸಿಇಒ ರುಚಿ ಬಿಂದಲ್ ಅವರು ಇತ್ತೀಚೆಗೆ ಮೆಡ್ಲೇರಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದರು. ಆದರೆ, ಆ ಸಂದರ್ಭದಲ್ಲಿ ಪಿಡಿಒ ರವಿಕುಮಾರ್ ಹಾಜರಿರಲಿಲ್ಲ. ರಾಹುತನಕಟ್ಟಿಯ ಖಾಯಂ ಪಿಡಿಓ ಆಗಿದ್ದ ರವಿಕುಮಾರ್ಗೆ ಮೆಡ್ಲೇರಿ ಗ್ರಾಮ ಪಂಚಾಯಿತಿಯ ಪ್ರಭಾರ ಹೊಣೆ ವಹಿಸಲಾಗಿತ್ತು. ಎರಡೂ ಕಡೆ ಅವರು ಕರ್ತವ್ಯಕ್ಕೆ ಗೈರಾಗಿದ್ದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಆದೇಶಿಸಲಾಗಿದೆ.
Laxmi News 24×7