ಹುಬ್ಬಳ್ಳಿ: ಅವಳಿ ನಗರ ಹುಬ್ಬಳ್ಳಿ-ಧಾರವಾಡವನ್ನು ಕಸಮುಕ್ತ ನಗರ ಮಾಡಲು ಮಹಾನಗರ ಪಾಲಿಕೆ ಕೋಟ್ಯಂತರ ರೂ ಹಣ ಮೀಸಲಿಡುತ್ತಿದೆ. ಆದರೆ ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳ ಬದಿಯಲ್ಲಿ ತ್ಯಾಜ್ಯ ರಾಶಿ ಬಿದ್ದಿದ್ದು, ದುರ್ನಾಥ ಬೀರುತ್ತಿದೆ.
ಮಹಾನಗರ ಪಾಲಿಕೆ ಹುಬ್ಬಳ್ಳಿ-ಧಾರವಾಡವನ್ನು ಪ್ರಸಕ್ತ ಸಾಲಿನಲ್ಲಿ ಕಸಮುಕ್ತ ನಗರವನ್ನಾಗಿಸಬೇಕು ಎಂದು ಪಣ ತೊಟ್ಟಿದೆ. ಪ್ರತಿ ಮನೆಯಿಂದ ಕಸ ಸಂಗ್ರಹಿಸುವ ಗುರಿ ಹೊಂದಿದೆ. ಇದಕ್ಕಾಗಿ ಪಾಲಿಕೆ ಒಡೆತನದ 274 ಕಸ ಸಂಗ್ರಹಣೆ ವಾಹನಗಳು ಸಾಲುತ್ತಿಲ್ಲ ಎಂದು 66 ವಾಹನಗಳನ್ನು ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಇದಕ್ಕಾಗಿ 6 ಕೋಟಿ ರೂ ತೆಗೆದಿರಿಸಲಾಗಿದೆ. ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣಕ್ಕೆ ಬಳಸಲು ಪಾಲಿಕೆ ಯೋಜನೆ ರೂಪಿಸುತ್ತಿದೆ.
ಅದಕ್ಕಾಗಿ ಕೋಟ್ಯಂತರ ರೂಪಾಯಿ ಮೀಸಲಿಟ್ಟಿದೆ.ಕುಸುಗಲ್ ರಸ್ತೆ, ಸುಳ್ಯ ರಸ್ತೆ, ಆನಂದನಗರ ರಸ್ತೆ, ಗೋಕುಲ್ ರಸ್ತೆಯ ರಾಜಧಾನಿ ಕಾಲೊನಿ, ಕಾರವಾರ ರಸ್ತೆ ಬದಿಗಳು ಡಂಪಿಂಗ್ ಯಾರ್ಡ್‌ನಂತಾಗಿವೆ. ಸಂಜೆ ಹೊತ್ತಿನಲ್ಲಿ ಕಸದ ರಾಶಿಗೆ ಬೆಂಕಿ ಹಚ್ಚುತ್ತಿದ್ದು, ಇದರಿಂದ ವಾಯು ಮಾಲಿನ್ಯವಾಗುತ್ತಿದೆ.
Laxmi News 24×7