ನವದೆಹಲಿ, ಮೇ 8: ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ನಲ್ಲಿ (Operation Sindoor) ಕುಟುಂಬದವರು ಹಾಗೂ ಸಂಬಂಧಿಕರು ಮೃತಪಟ್ಟಿರುವುದಾಗಿ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ (Jaish-e-Mohammad) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ (Masood Azhar) ಹೇಳಿಕೊಂಡಿದ್ದಾನೆ. ಕುಟುಂಬದ 10 ಮಂದಿ ಸದಸ್ಯರು ಮತ್ತು ನಾಲ್ವರು ಅತ್ಯಾಪ್ತರು ಸಾವಿಗೀಡಾಗಿದ್ದಾರೆ ಎಂದು ಆತ ತಿಳಿಸಿರುವುದಾಗಿ ವರದಿಯಾಗಿದೆ. ಆದಾಗ್ಯೂ ಆತನಲ್ಲಿ ಕಣ್ಣೀರು ಕಂಡುಬಂದಿಲ್ಲ. ಅಷ್ಟೇ ಯಾಕೆ, ವಿಷಾದವಾಗಲೀ ಹತಾಶೆಯಾಗಲೀ ಇಲ್ಲ. ಇದನ್ನು ಸ್ವತಃ ಆತನೇ ಹೇಳಿಕೊಂಡಿದ್ದಾನೆ. ಇಷ್ಟೆಲ್ಲ ಆದ ಮೇಲೂ ಆತನಿಗಿರುವುದು ಭಯೋತ್ಪಾದನೆಯ ಕನಸು ಮಾತ್ರ!
‘‘ನನ್ನ ಕುಟುಂಬದ ಹತ್ತು ಮಂದಿ ಇಂದು ರಾತ್ರಿ ಭಗವಂತನಿಂದ ಆಶೀರ್ವದಿಸಲ್ಪಟ್ಟರು. ಇದರಲ್ಲಿ ಐವರು ಮುಗ್ಧ ಮಕ್ಕಳು, ನನ್ನ ಅಕ್ಕ, ಅವರ ಪತಿ ಸೇರಿದ್ದಾರೆ. ವಿದ್ವಾಂಸ ಫಜಿಲ್ ಭಂಜೆ (ಸೋದರಳಿಯ), ಆತನ ಪತ್ನಿ ಮತ್ತು ಸೊಸೆ, ನನ್ನ ಪ್ರೀತಿಯ ಸಹೋದರ ಹುಜೈಫಾ ಮತ್ತು ಅವರ ತಾಯಿ ಹಾಗೂ ಇನ್ನೂ ಇಬ್ಬರು ಆತ್ಮೀಯ ಸಹಚರರು ಮೃತಪಟ್ಟಿದ್ದಾರೆ. ಅವರೆಲ್ಲ ಅಲ್ಲಾಹನ ಅತಿಥಿಗಳಾಗಿದ್ದಾರೆ’’ ಎಂದು ಅಜರ್ ಹೇಳಿದ್ದಾನೆ.
‘‘ಈ ಘಟನೆ ಬಗ್ಗೆ ನನಗೆ ವಿಷಾದ ಅಥವಾ ಹತಾಶೆ ಇಲ್ಲ. ನಾನೂ ಈ ಹದಿನಾಲ್ಕು ಸದಸ್ಯರ ಜತೆ ಸೇರಬೇಕಿತ್ತು. ಅವರು ಇಲ್ಲಿಂದ ಹೊರಡುವ ಸಮಯ ಬಂದಿತ್ತು. ಆದರೆ ಭಗವಂತ ನನ್ನನ್ನು ಉಳಿಸಿದ. ಈ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ’’ ಎಂದು ಉಗ್ರ ಮಸೂದ್ ಅಜರ್ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ಪ್ರತೀಕಾರದ ಮಾತುಗಳನ್ನೂ ಆಡಿದ್ದಾನೆ.
Laxmi News 24×7