ನವದೆಹಲಿ/ಹುಬ್ಬಳ್ಳಿ: ರಾಜ್ಯದ ಧಾರವಾಡ ಐಐಟಿ ಸೇರಿದಂತೆ ದೇಶದ 5 ಐಐಟಿಗಳಲ್ಲಿ ₹11,828.79 ಕೋಟಿ ವೆಚ್ಚದಲ್ಲಿ ಶೈಕ್ಷಣಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಧಾರವಾಡ ಐಐಟಿ, ಆಂಧ್ರಪ್ರದೇಶದ ತಿರುಪತಿ ಐಐಟಿ, ಛತ್ತೀಸ್‌ಗಢದ ಭಿಲಾಯಿ ಐಐಟಿ, ಜಮ್ಮು-ಕಾಶ್ಮೀರದ ಜಮ್ಮು ಐಐಟಿ ಮತ್ತು ಕೇರಳದ ಪಾಲಕ್ಕಾಡ್‌ಗಳಲ್ಲಿ ಸ್ಥಾಪಿಸಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿ) ಶೈಕ್ಷಣಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ ಅನುಮೋದನೆ ನೀಡಿತು ಎಂದಿದ್ದಾರೆ.
ಈ ಐದು ಪ್ರಮುಖ ಐಐಟಿಗಳಲ್ಲಿ 6500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುವಂತೆ ಸೌಲಭ್ಯಗಳ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ, ಕೈಗಾರಿಕೆ-ಶೈಕ್ಷಣಿಕ ಸಂಪರ್ಕವನ್ನು ಬಲಪಡಿಸಲು ಐದು ಹೊಸ ಅತ್ಯಾಧುನಿಕ ಸಂಶೋಧನಾ ಪಾರ್ಕ್‌ಗಳು ಸಹ ಈ ಯೋಜನೆಯಲ್ಲಿ ಬರಲಿವೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸಲಾದ ಐದು ಹೊಸ ಐಐಟಿಗಳ ಅಭಿವೃದ್ಧಿಗೆ “ಬಿ” ಹಂತದ ಯೋಜನೆ ಇದಾಗಿದ್ದು, ಕೇಂದ್ರ ಸಂಪುಟದಿಂದ ಅನುಮೋದನೆಗೊಂಡಿತು ಎಂದು ಹೇಳಿದ್ದಾರೆ.
130 ಅಧ್ಯಾಪಕರ ಹುದ್ದೆಗಳ ಸೃಷ್ಟಿಗೆ ಅಸ್ತು: 2025-26ರಿಂದ 2028-29ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು ₹ 11,828.79 ಕೋಟಿ ವೆಚ್ಚದಲ್ಲಿ ಈ ಐಐಟಿಗಳಲ್ಲಿ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗುತ್ತಿದ್ದು, 130 ಅಧ್ಯಾಪಕರ ಹುದ್ದೆಗಳನ್ನು (ಪ್ರೊಫೆಸರ್ ಮಟ್ಟದಲ್ಲಿ ಅಂದರೆ ಹಂತ 14 ಮತ್ತು ಅದಕ್ಕಿಂತ ಹೆಚ್ಚಿನ) ಸೃಷ್ಟಿಸಲು ಸಂಪುಟ ಅನುಮೋದಿಸಿದೆ ಎಂದು ತಿಳಿಸಿದ್ದಾರೆ.
ಅನುಷ್ಠಾನ ತಂತ್ರ ಮತ್ತು ಗುರಿಗಳು: ಮುಂದಿನ ನಾಲ್ಕು ವರ್ಷಗಳಲ್ಲಿ ಈ ಐಐಟಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತದೆ. ಮೊದಲ ವರ್ಷದಲ್ಲಿ 1364 ವಿದ್ಯಾರ್ಥಿಗಳು, 2ನೇ ವರ್ಷದಲ್ಲಿ 1738, 3ನೇ ವರ್ಷದಲ್ಲಿ 1767 ಹಾಗೂ 4ನೇ ವರ್ಷದಲ್ಲಿ 1707 ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದ್ದು, ಒಟ್ಟಾರೆ 6500ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.
ಈ ಐದು ಐಐಟಿಗಳು ಪ್ರಸ್ತುತ 7,111 ವಿದ್ಯಾರ್ಥಿಗಳ ಸಂಖ್ಯೆಗೆ ಬದಲಾಗಿ 13,687 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಿವೆ. ಅಂದರೆ ಈಗಲೇ 6,576 ವಿದ್ಯಾರ್ಥಿಗಳ ಹೆಚ್ಚಳ ಕಂಡಿದೆ. ಒಟ್ಟು ಸೀಟುಗಳ ಸಂಖ್ಯೆಯಲ್ಲಿನ ಈ ಹೆಚ್ಚಳದೊಂದಿಗೆ ಹೆಚ್ಚುವರಿಯಾಗಿ 6,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರ್ಪಡೆಯಾಗುತ್ತಾರೆ. ಈ ಮೂಲಕ ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಬೇಡಿಕೆಯ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಆಕಾಂಕ್ಷೆಯನ್ನು ಪೂರೈಸಲು ಸಾಧ್ಯವಾಗಲಿದೆ ಎಂದು ಸಚಿವ ಜೋಶಿ ಅಭಿಪ್ರಾಯಪಟ್ಟರು.
Laxmi News 24×7