ಬೆಳಗಾವಿ : ಸುಪ್ರಸಿದ್ಧ ಯಲ್ಲಮ್ಮನ ಗುಡ್ಡದ ರೇಣುಕಾದೇವಿ ದೇವಸ್ಥಾನದ ಆವರಣದಲ್ಲಿ ಗುರುವಾರ ಅನಧಿಕೃತ ಮಳಿಗೆಗಳ ತೆರವು ಕಾರ್ಯಾಚರಣೆ ವೇಳೆ, ಅಧಿಕಾರಿ ಹಾಗೂ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಅಧಿಕಾರಿ ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಿ, ಲಂಬಾಣಿ ಸಮುದಾಯದ ಜನರು ಪ್ರತಿಭಟಿಸಿದ ಘಟನೆ ಕೂಡ ನಡೆದಿದೆ.
ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹಾಗಾಗಿ, ಅನಧಿಕೃತ ಮಳಿಗೆಗಳನ್ನು ತೆರವು ಮಾಡಲು ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿತ್ತು. ಆದರೂ ಅವರು ಅಂಗಡಿಗಳನ್ನು ತೆರವು ಮಾಡಿರಲಿಲ್ಲ. ಬುಧವಾರ ರಾತ್ರಿಯೇ ತೆರವು ಮಾಡುವ ಮುನ್ನೆಚ್ಚರಿಕೆ ನೀಡಲಾಗಿತ್ತು. ಆದರೂ ವ್ಯಾಪಾರಿಗಳು ಅದಕ್ಕೆ ಬೆಲೆ ಕೊಟ್ಟಿರಲಿಲ್ಲ. ಗುರುವಾರ ಬೆಳಗ್ಗೆ ತೆರವು ಕಾರ್ಯಾಚರಣೆ ಆರಂಭವಾಯಿತು. ಆಗ ಸ್ಥಳಕ್ಕೆ ಬಂದ ಪುರುಷರು, ಮಹಿಳೆಯರು ಪ್ರಾಧಿಕಾರದ ಕಾರ್ಯದರ್ಶಿ ಅಶೋಕ್ ದುಡಗುಂಟಿ ಅವರ ಕಾರ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು.
ಪ್ರಾಧಿಕಾರದ ಕಾರ್ಯದರ್ಶಿ ಅಶೋಕ್ ದುಡಗುಂಟಿ ಅವರು ಅವಾಚ್ಯ ಪದದಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ಅವರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಅವರ ಮೇಲೆ ಹಲ್ಲೆಗೂ ಮುಂದಾದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಆಯುಕ್ತರಿಗೆ ರಕ್ಷಣೆ ನೀಡಿದರು. ಉದ್ರಿಕ್ತ ಜನರನ್ನು ಸಮಾಧಾನ ಪಡಿಸಿದರು. ವ್ಯಾಪಾರಿಗಳ ತೀವ್ರ ವಿರೋಧದ ನಡುವೆಯೂ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ.
ಈ ಬಗ್ಗೆ ವ್ಯಾಪಾರಿಯೊಬ್ಬರು ಮಾತನಾಡಿದ್ದು, ‘ದೇವಸ್ಥಾನಕ್ಕೆ ಅಭಿವೃದ್ಧಿ ಪ್ರಾಧಿಕಾರವಾಗಿ ಒಂದು ವರ್ಷವಾದ ನಂತರ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಬಂದ ಅಶೋಕ್ ದುಡಗುಂಟಿ ಅವರು ಅಂಗಡಿ ಮುಂಗಟ್ಟನ್ನು ತೆರೆಯುವಂತೆ ಹೇಳಿದ್ದಾಗ ನಾವು ಅವರಿಗೆ ಸಹಕಾರ ಕೊಟ್ಟು ತೆಗೆಯುತ್ತಿದ್ದೆವು. ಆದರೆ, ಲಂಬಾಣಿ ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ದಂಧೆ ಮಾಡುತ್ತೀರಿ ಎಂದು ಅವಮಾನ ಮಾಡಿದ್ದಾರೆ. ಹೀಗಾಗಿ, ನಾವು ಬಂಜಾರ ಸಮುದಾಯ ಹಾಗೂ ವ್ಯಾಪಾರಿಗಳು ಸೇರಿ ಪ್ರತಿಭಟನೆ ಮಾಡುತ್ತಿದ್ದೇವೆ. ಅವರು ಬಂದು ಕ್ಷಮೆ ಕೇಳಬೇಕು ಹಾಗೂ ನಮಗೆ ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.
Laxmi News 24×7