Breaking News

ಸೈಬರ್ ವಂಚಕರ ಕಿರುಕುಳಕ್ಕೆ ವೃದ್ಧ ದಂಪತಿ ಸಾವು ಪ್ರಕರಣ: ಬೆಳಗಾವಿ ಪೊಲೀಸರು ಗುಜರಾತ್ ಆರೋಪಿ ಹೆಡೆಮುರಿ ಕಟ್ಟಿದ್ದು ಹೇಗೆ?

Spread the love

ಬೆಳಗಾವಿ: ಸೈಬರ್ ಅಪರಾಧಿಗಳ ಕೃತ್ಯಕ್ಕೆ ಹಣ ಕಳೆದುಕೊಂಡವರು ಸಾಕಷ್ಟು ಜನ. ಆದರೆ, ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ವೃದ್ಧ ದಂಪತಿ ಲಕ್ಷಾಂತರ ರೂ. ಹಣದ ಜೊತೆಗೆ ತಮ್ಮ ಜೀವವನ್ನೇ ಕಳೆದುಕೊಂಡಿದ್ದರು. ಆ ಕೀಚಕರ ಕಿರುಕುಳಕ್ಕೆ ಬೇಸತ್ತು ಇಳಿ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈಗ ಜಿಲ್ಲಾ ಸಿಇಎನ್ ಪೊಲೀಸರು ಆ ಪ್ರಕರಣದ ಓರ್ವ ಆರೋಪಿಗೆ ಹೆಡೆಮುರಿ ಕಟ್ಟಿದ್ದು, ಪ್ರಮುಖ ಆರೋಪಿಗಳಿಗೂ ಖೆಡ್ಡಾ ರೆಡಿ ಮಾಡಿದ್ದಾರೆ‌.

ಹೌದು, ಬೀಡಿ ಗ್ರಾಮದ ಕ್ರಿಶ್ಚಿಯನ್ ಓಣಿಯ ನಿವಾಸಿಗಳಾಗಿದ್ದ ನಿವೃತ್ತ ರೈಲ್ವೆ ಉದ್ಯೋಗಿ ಡಿಯಾಗೋ ನಜರತ್ (83) ಮತ್ತು ಅವರ ಪತ್ನಿ ಫ್ಲೇವಿಯಾ ನಜರತ್ (78) ಅವರು ಮಾರ್ಚ್ 27ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಫ್ಲೇವಿಯಾ ನಿದ್ರೆ ಮಾತ್ರೆ ಸೇವಿಸಿ ಮೃತಪಟ್ಟಿದ್ದರೆ, ಡಿಯಾಗೊ ಚಾಕುವಿನಿಂದ ಚುಚ್ಚಿಕೊಂಡು, ಮನೆಯ ಹಿಂದಿನ ನೀರಿನ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಸಾವಿಗೂ ಮುನ್ನ ತಮಗಾದ ವಂಚನೆ ಕುರಿತು ಡೆತ್​ನೋಟ್ ಕೂಡಾ ಬರೆದಿಟ್ಟಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್​, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಮೃತ ಡಿಯಾಗೋ ಅವರು ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿದ್ದ ಜಾಡನ್ನು ಹಿಡಿದು ಬೆಳಗಾವಿ ಪೊಲೀಸರು ಗುಜರಾತ್ ರಾಜ್ಯದ ಸೂರತ್​ಗೆ ತೆರಳಿದ್ದರು. ಅಲ್ಲಿನ ನಿವಾಸಿ ಚಿರಾಗ್ ಜೀವರಾಜಬಾಯ್ ಲಕ್ಕಡ್ ಎಂಬ ಆರೋಪಿಯನ್ನು ಬಂಧಿಸಿ, ಬೆಳಗಾವಿಗೆ ಕರೆ ತಂದಿದ್ದಾರೆ. ಆರೋಪಿ ವಿರುದ್ಧ ಅಪರಾಧ ಸಂಖ್ಯೆ 32/2025 ಕಲಂ 66(ಡಿ) ಐಟಿ ಕಾಯ್ದೆ ಮತ್ತು ಕಲಂ 108, 308(2), 319(2), 03(5) ಬಿಎನ್ಎಸ್ ಅಡಿ ಖಾನಾಪುರ ತಾಲೂಕಿನ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.‌

ಪ್ರಕರಣದ ಬಗ್ಗೆ ಎಸ್​​​​ಪಿ ಗುಳೇದ ಮಾಹಿತಿ: ಡಾ.ಭೀಮಾಶಂಕರ ಗುಳೇದ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, “ಆರೋಪಿ ಚಿರಾಗ್ ಮೊಬೈಲ್ ನಂಬರ್ ಬಳಸಿಕೊಂಡು ಸೈಬರ್ ವಂಚಕರು ಇಂಟರನೆಟ್ ಬ್ಯಾಂಕಿಂಗ್ ಮೂಲಕ ಮೃತ ಡಿಯಾಗೋ ನಜರತ್ ಅವರ ಬ್ಯಾಂಕ್ ಖಾತೆಯಿಂದ 6.10 ಲಕ್ಷ ರೂ. ವರ್ಗಾಯಿಸಿಕೊಂಡಿದ್ದರು. ಬಂಧಿತ ಆರೋಪಿ ಚಿರಾಗ್ ಈ ಪ್ರಕರಣದಲ್ಲಿ ಅಪ್ರತ್ಯಕ್ಷ ಪಾತ್ರ ನಿರ್ವಹಿಸಿದ್ದಾನೆ. ನೇರವಾಗಿ ಪ್ರಕರಣದಲ್ಲಿ ಭಾಗಿಯಾಗದೇ ಇದ್ದರೂ ಆತನ ಮೊಬೈಲ್ ನಂಬರ್ ಬಳಸಿಕೊಂಡ ಆರೋಪಿಗಳು ಬಾಲಾಜಿ ಇಂಡಸ್ಟ್ರೀಸ್ ಎಂಬ ಕಂಪನಿ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿಕೊಂಡು ಆ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದರು. ಅದಾದ ಬಳಿಕ ಆ ಹಣ ಬೇರೆ ಖಾತೆಗಳಿಗೆ ವರ್ಗಾವಣೆ ಆಗಿದೆ. ಆ ಕುರಿತು ನಮ್ಮ ತನಿಖೆ ಮುಂದುವರಿದಿದೆ” ಎಂದರು.

ಬೇರೆ ಬೇರೆ ಖಾತೆಗಳಿಗೆ 59 ಲಕ್ಷ ವರ್ಗಾವಣೆ: “ಇನ್ನು ಒಂದು ತಿಂಗಳ ಅಂತರದಲ್ಲಿ ಮೃತ ಡಿಯಾಗೋ ನಜರತ್ ಅವರ ಬ್ಯಾಂಕ್ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಸುಮಾರು 59 ಲಕ್ಷ ವರ್ಗಾವಣೆ ಆಗಿದೆ. ಈ ಪ್ರಕರಣದಲ್ಲಿ ಎಷ್ಟು ಆರೋಪಿಗಳು ಶಾಮೀಲಾಗಿದ್ದಾರೆ ಅಂತಾ ಈಗಲೇ ಹೇಳಲು ಬರುವುದಿಲ್ಲ. ಇದು ಪ್ರಾಥಮಿಕ ಹಂತದ ಸಾಕ್ಷಿ ಮತ್ತು ಯಶಸ್ಸು ಅಂತಾನೇ ಹೇಳಬಹುದು‌. ಮುಂದಿನ ದಿನಗಳಲ್ಲಿ ಎಲ್ಲ ಆಯಾಮಗಳಿಂದ ತನಿಖೆ ಕೈಗೊಳ್ಳಲಾಗುವುದು” ಎಂದು ತಿಳಿಸಿದರು‌.

“ಪ್ರತಿಯೊಂದು ಸೈಬರ್ ಪ್ರಕರಣಗಳನ್ನು ನಮ್ಮ ಪೊಲೀಸರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ‌. ಈ ಪ್ರಕರಣದಲ್ಲಿ ಇಷ್ಟೇ ದಿನಗಳಲ್ಲಿ ಇನ್ನುಳಿದ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಲು ಬರುವುದಿಲ್ಲ‌. ಆದರೆ, ಭಾರತ ದೇಶದ ಯಾವುದೇ ಮೂಲೆಯಲ್ಲಿ ಇದ್ದರೂ ಕೂಡ ಆರೋಪಿಗಳನ್ನು ಬಿಡುವುದಿಲ್ಲ. ಹಿಡಿದೇ ಹಿಡಿಯುತ್ತೇವೆ” ಎಂದು ಸ್ಪಷ್ಟಪಡಿಸಿದರು.

ವಿವಿಧ ಆಯಾಮಗಳಲ್ಲಿ ತನಿಖೆ: “ನಮ್ಮ ಪೊಲೀಸರ ತಂಡ ಸೂರತ್​ಗೆ ಹೋಗಿ ಆರೋಪಿಯನ್ನು ಬಂಧಿಸಿದೆ. ತನಿಖೆಯಲ್ಲಿ ಕಂಡು ಬಂದ ಅಂಶದ ಪ್ರಕಾರ ಅಲ್ಲಿ ಬಾಲಾಜಿ ಇಂಡಸ್ಟ್ರೀಸ್ ಎನ್ನುವ ಕಂಪನಿಯೇ ಇಲ್ಲ. ಇದರಲ್ಲಿ ಒಂದು ರೀತಿಯಲ್ಲಿ ಬ್ಯಾಂಕ್ ಅಧಿಕಾರಿಗಳೂ ಹೊಣೆಗಾರರು ಆಗಿದ್ದಾರೆ. ಹಾಗಾಗಿ, ಅವರನ್ನು ಕೂಡ ಬೇರೆ ಆಯಾಮಗಳಲ್ಲಿ ತನಿಖೆ ನಡೆಸುತ್ತೇವೆ. ಮೃತ ದಂಪತಿಗಳ ಸಾವಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಮ್ಮ ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಶ್ಲಾಘಿಸಿದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ