ವಿಜಯನಗರ: ಹಳೆ ದ್ವೇಷದ ಹಿನ್ನೆಲೆಯಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪಿ, ಸ್ಥಳ ಪಂಚನಾಮೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ಆತನ ಬಲಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿಬಾಬು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೊನ್ನೂರ ಅಲಿಯಾಸ್ ಹೊನ್ನೂರ ಸ್ವಾಮಿ (28) ಎನ್ನುವವನನ್ನು ಕೊಲೆ ಮಾಡಿರುವ ಘಟನೆ ಹೊಸಪೇಟೆ ನಗರದ ಜಂಬುನಾಥ ರಸ್ತೆಯ ಅಂಬೇಡ್ಕರ್ ನಗರದ 4ನೇ ಕ್ರಾಸ್ನಲ್ಲಿ ಬುಧವಾರ ರಾತ್ರಿ ನಡೆದಿತ್ತು. ಆರೋಪಿ ಕಾಳಿ ಅಲಿಯಾಸ್ ಹುಚ್ಚ ಕಾಳಿ(30)ಯನ್ನು ರಾತ್ರಿಯೇ ಪೊಲೀಸರು ಬಂಧಿಸಿದ್ದರು. ಸ್ಥಳ ಪಂಚನಾಮೆಗೆಂದು ಹೊಸಪೇಟೆ ಹೊರವಲದ ಮಹದೇವ ಇಂಡಸ್ಟ್ರೀಸ್ ಪ್ರದೇಶಕ್ಕೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಆರೋಪಿ ಕಾಳಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆತನ ಬಲಗಾಲಿಗೆ ಪಟ್ಟಣ ಠಾಣೆ ಪಿಐ ಹುಲಗಪ್ಪ ತುಪಾಕಿಯಿಂದ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಮುಖ್ಯ ಕಾನ್ಸ್ ಟೇಬಲ್ ಲಿಂಗರಾಜ್ ಹಾಗೂ ಕಾನ್ಸ್ ಟೇಬಲ್ ಕೊಟ್ರೇಶ್ ಎಂಬವರು ಗಾಯಗೊಂಡಿದ್ದಾರೆ. ಸದ್ಯ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.
Laxmi News 24×7