ಬೆಳಗಾವಿ : ಮಹಾರಾಷ್ಟ್ರ ಸರ್ಕಾರದ ಬೆಂಬಲದೊಂದಿಗೆ ಬೆಳಗಾವಿಯಲ್ಲಿ ಸ್ಮೃತಿ ಭವನ ನಿರ್ಮಾಣಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಂದಾಗಿದೆ. ಇದು ಕನ್ನಡಿಗರನ್ನು ಕೆರಳಿಸಿದೆ. ಯಾವುದೇ ಕಾರಣಕ್ಕೂ ಈ ಭವನ ನಿರ್ಮಾಣಕ್ಕೆ ಅವಕಾಶ ನೀಡದಂತೆ ಕರ್ನಾಟಕ ಸರ್ಕಾರಕ್ಕೆ ಕನ್ನಡ ಸಂಘಟನೆಗಳು ಆಗ್ರಹಿಸಿವೆ.
ಹೌದು, ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ”ಸ್ಮೃತಿ ಭವನ” ನಿರ್ಮಾಣಕ್ಕಾಗಿ ಎಂಇಎಸ್ ಮುಖಂಡರು ಇದೇ ಮಾರ್ಚ್ 31 ರಂದು ಭೂಮಿ ಪೂಜೆ ನೆರವೇರಿಸಿದ್ದಾರೆ. 1986ರ ಜೂನ್ 1ರಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರು ಬೆಳಗಾವಿಯಲ್ಲಿ ಆರಂಭಿಸಿದ “ಸೀಮಾ ಲಢಾಯಿ” ( ಗಡಿ ಚಳವಳಿ) ಚಳವಳಿಯಲ್ಲಿ ಭಾರಿ ಹಿಂಸಾಚಾರ ನಡೆಯಿತು. ಮಹಾರಾಷ್ಟ್ರದಿಂದ ಬೆಳಗಾವಿಗೆ ನುಗ್ಗಿದ ಅಲ್ಲಿಯ ನಾಯಕರ ಬೆಂಬಲಿಗರು ಬೆಳಗಾವಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಹಿಂಸಾಚಾರ ನಡೆಸಿದರು. ಹಿಂಡಲಗಾ ಪಂಪಿಂಗ್ ಸ್ಟೇಷನ್ ಸುಡಲು ಮುಂದಾದಾಗ ಕರ್ನಾಟಕ ಪೊಲೀಸರು ಗೋಲಿಬಾರ್ ಮಾಡಿದರು. ಇದರಲ್ಲಿ 9 ಹಿಂಸಾಚಾರಿಗಳು ಸಾವನ್ನಪ್ಪಿದರು.
ಇವರನ್ಮು ಹುತಾತ್ಮರೆಂದು ಬಿಂಬಿಸುತ್ತಿರುವ ಎಂಇಎಸ್ ಪ್ರತಿವರ್ಷ ಜೂನ್ 1ರಂದು ಹುತಾತ್ಮ ದಿನವನ್ನು ಆಚರಿಸುತ್ತದೆ.ಗೋಲಿಬಾರ್ನಲ್ಲಿ ಸತ್ತವರನ್ನು ವೈಭವೀಕರಿಸಲು ಹಾಗೂ ಇದನ್ನೇ ರಾಜಕೀಯ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಎಂಇಎಸ್ ನಾಯಕರು ಒಂದು ಭವನವನ್ನೇ ನಿರ್ಮಿಸಲು ಸಿದ್ಧತೆ ನಡೆಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಈ ಭವನಕ್ಕೆ ಹಣಕಾಸು ನೆರವು ನೀಡಲಿದೆ. ಈ ಭವನದಲ್ಲಿ ಕರ್ನಾಟಕ ಸರ್ಕಾರ ಮತ್ತು ಪೊಲೀಸರ ವಿರುದ್ಧ ಮುಗ್ದ ಮರಾಠಿಗರನ್ನು ಪ್ರಚೋದಿಸುವ ಛಾಯಾಚಿತ್ರಗಳ ಪ್ರದರ್ಶನ, ಸಾಕ್ಷ್ಯ ಚಿತ್ರಗಳ ಪ್ರದರ್ಶನ ನಡೆಯಲಿವೆ. ಇದು ಕರ್ನಾಟಕ ಸರ್ಕಾರ ಹಾಗೂ ಕನ್ನಡಿಗರ ಹಿತಕ್ಕೆ ಭಾರಿ ಹೊಡೆತ ಬೀಳಲಿದೆ ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಅಶೋಕ ಚಂದರಗಿ ಆತಂಕ ವ್ಯಕ್ತಪಡಿಸಿದ್ದಾರೆ.
Laxmi News 24×7