ಬೆಂಗಳೂರು : ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಹಾಗೂ ಅವರ ಮಗ ಬಿ. ವೈ ವಿಜಯೇಂದ್ರ ಸೇರಿ ಒತ್ತಡ ತಂದು ನನ್ನನ್ನು ಉಚ್ಚಾಟನೆ ಮಾಡಿಸಿದ್ದಾರೆ ಎಂದು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ನಗರದಲ್ಲಿ ಇಂದು ಶನಿಮಹಾತ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವ ವೀರಶೈವ ಲಿಂಗಾಯತರು ಯಡಿಯೂರಪ್ಪ ಅವರ ಜೊತೆಗಿಲ್ಲ. ಈ ಭ್ರಮೆಯಿಂದ ಕೇಂದ್ರ ಹೈಕಮಾಂಡ್ ಹೊರಗೆ ಬರಬೇಕು ಎಂದು ಹೇಳಿದರು.
ರಾಮಾಯಣ, ಮಹಾಭಾರತದಲ್ಲೂ ಅಪಮಾನ ಮಾಡಿರುವ ಘಟನಾವಳಿಗಳು ಇವೆ. ಹಾಗಾಗಿ ನನಗೆ ಯಾವ ಮುಜುಗರವೂ ಇಲ್ಲ. ಯಡಿಯೂರಪ್ಪ ಕುಟುಂಬವನ್ನು ನಾನು ಹೊರಗೆ ಇಡುವವರೆಗೂ ಬಿಡುವುದಿಲ್ಲ ಎಂದು ಯತ್ನಾಳ್ ಶಪಥ ಮಾಡಿದ್ದಾರೆ. ಮುಂದೆ ಏನಾಗುತ್ತದೆ ನೋಡಿ, ಇದಕ್ಕೆ ಕಾರಣಕರ್ತರಾದವರು ನಾಶ ಆಗುತ್ತಾರೆ ಎಂದು ಕಿಡಿಕಾರಿದರು.
ನಾನು ಮತ್ತೆ ದೆಹಲಿಗೆ ಹೋಗಲ್ಲ : ನಾನು ಮತ್ತೆ ದೆಹಲಿಗೆ ಹೋಗುವುದಿಲ್ಲ. ಮರು ಪರಿಶೀಲನೆಗೆ ನಾನು ಮನವಿ ಮಾಡುವುದಿಲ್ಲ. ನಾನು ಹಿಂದೂ ಪರವಾಗಿ ಹೋರಾಟ ಮಾಡುತ್ತೇನೆ. ನಾನು ಬಿಜೆಪಿಯನ್ನು ತೊರೆಯುವುದಿಲ್ಲ. ರಾಜ್ಯಾದ್ಯಂತ ಸುತ್ತಿ ಬಿಜೆಪಿಯನ್ನು ರಿಪೇರಿ ಮಾಡುತ್ತೇನೆ. ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡುತ್ತಾರೆ ಎಂದರು.ಸನಾತನ ಹಿಂದೂ ಧರ್ಮದಿಂದ ಹಳಿ ತಪ್ಪಿರುವ ಪಕ್ಷವನ್ನು ಪುನಃ ಟ್ರ್ಯಾಕ್ ಮೇಲೆ ತರುವ ಕೆಲಸ ಮಾಡುತ್ತೇನೆಯೇ ಹೊರತು, ಯಾವತ್ತೂ ಹೊಸ ಪಕ್ಷ ಕಟ್ಟುವ ಸಾಹಸಕ್ಕೆ ಮುಂದಾಗುವುದಿಲ್ಲ ಎಂದು ಹೇಳಿದರು.
Laxmi News 24×7