ಬೆಂಗಳೂರು : ಕೇಂದ್ರ ಸಚಿವರಾಗಿ, ಶಾಸಕರಾಗಿ ಹಾಗೂ ಪಕ್ಷದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿ ಮೂರು ದಶಕದ ಕರ್ನಾಟಕ ರಾಜಕಾರಣದಲ್ಲಿ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ಜನಜನಿತವಾಗಿದೆ.
ವಿಭಿನ್ನ ಮಾತು, ನೇರ ನಡೆ, ನುಡಿ, ಹಿಂದುತ್ವದ ಚಿಂತನೆಗಳಿಂದ ಫೈರ್ ಬ್ರಾಂಡ್ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದಾರೆ. ಕರ್ನಾಟಕದ ರಾಜಕೀಯ ವಲಯದಲ್ಲಿ ನಿರೀಕ್ಷಿತ ಸ್ಥಾನಮಾನ ಸಿಕ್ಕಿಲ್ಲವೆಂಬ ಕೊರಗು ಅವರನ್ನು ಕಾಡುತ್ತಲೇ ಇತ್ತು. ಬಿಜೆಪಿಯಲ್ಲೇ ರಾಜಕೀಯ ವಿರೋಧಿಗಳನ್ನು ಮಾಡಿಕೊಂಡಿರುವುದು ತಿಳಿದ ವಿಚಾರವೇ. ರಾಜಕೀಯ ಗದ್ದುಗೆ ಗುದ್ದಾಟದಲ್ಲಿ ಮುಂಚೂಣಿಯಲ್ಲಿರುವ ಇರುವ ಯತ್ನಾಳ್ ಅವರನ್ನು ಕೇಂದ್ರೀಯ ಶಿಸ್ತು ಸಮಿತಿ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ.
ಬಿಜೆಪಿಗೆ ಬಂದಿದ್ದೇಗೆ? : 1994ರಲ್ಲಿ ಬಿಜೆಪಿಯಿಂದ ವಿಜಾಪುರ (ವಿಜಯಪುರ) ಕ್ಷೇತ್ರದಿಂದ ಗೆದ್ದವರು ಬಸನಗೌಡ ಪಾಟೀಲ್ ಯತ್ನಾಳ್ ಅವರು. ನಾಯಕತ್ವದ ಗುಣ, ಮಾತುಗಾರಿಕೆ ಇದ್ದ ಕಾರಣ ನಾಯಕರ ಸಖ್ಯ ಅವರಿಗೆ ಬೇಗನೆ ಸಿಕ್ಕಿತು. ಅವರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾಗುವ ಅವಕಾಶ ಕೂಡ ದೊರೆಯಿತು. 1999ರಲ್ಲಿ ವಿಜಾಪುರ ಕ್ಷೇತ್ರದಿಂದ ಗೆದ್ದು ಮೂರನೇ ವರ್ಷದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ರೈಲ್ವೆ, ಜವಳಿ ಕಾತೆ ರಾಜ್ಯ ಸಚಿವರಾಗಿಯೂ ಕೆಲಸ ಮಾಡಿದ್ದರು. ಮತ್ತೊಂದು ಬಾರಿ ಸಂಸದರಾದರು.
ಬಿಜೆಪಿಯಿಂದ ಹೊರ ಬಂದ ಯತ್ನಾಳ್ : ಆ ಹೊತ್ತಿಗಾಗಲೇ ಬಿಜೆಪಿಯ ಹಿರಿಯ ನಾಯಕರೊಂದಿಗೆ ಸೃಷ್ಟಿಸಿಕೊಂಡಿದ್ದ ಭಿನ್ನಾಭಿಪ್ರಾಯಗಳಿಂದ ಅವರು ಬಿಜೆಪಿ ಬಿಡುವ ಸನ್ನಿವೇಶ ನಿರ್ಮಾಣವಾಯಿತು. 2013ರಲ್ಲಿ ವಿಧಾನಸಭೆ ಚುನಾವಣೆಗೆ ಟಿಕೆಟ್ ಸಹ ಸಿಗದೇ ಕೊನೆಗೆ ಜೆಡಿಎಸ್ಗೆ ಸೇರಿದರು. ದೇವರಹಿಪ್ಪರಗಿ ಕ್ಷೇತ್ರಕ್ಕೆ ವಲಸೆ ಹೋಗಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಯತ್ನಾಳ್ ಅಲ್ಲಿ ಸೋತರು. ಮೂರು ವರ್ಷಗಳಲ್ಲೇ ಜೆಡಿಎಸ್ ಬಿಟ್ಟು ಮತ್ತೆ ಬಿಜೆಪಿಗೆ ಸೇರಿದರು. 2015ರಲ್ಲಿ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆ ಟಿಕೆಟ್ ಬಯಸಿ ಅವಕಾಶ ಸಿಗದೇ ಬಂಡಾಯವೆದ್ದು ಗೆದ್ದರು. ಆಗ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು. ಇದಾಗಿ ಮೂರು ವರ್ಷ ಮತ್ತೆ ವಿಧಾನಸಭೆ ಚುನಾವಣೆ ಬಂದಾಗ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ 2018ರಲ್ಲಿ ಬಿಜೆಪಿ ಸೇರಿ ವಿಧಾನಸಭೆ ಚುನಾವಣೆ ಟಿಕೆಟ್ ಪಡೆದು ಭಾರೀ ವಿರೋಧದ ನಡುವೆಯೂ ಗೆದ್ದರು. ಮರು ವರ್ಷ ಬಿಜೆಪಿ ಸರ್ಕಾರ ರಚನೆಯಾದರೂ ಸಚಿವರಾಗುವ ಆಸೆ ಈಡೇರಲೇ ಇಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲಿ ಯತ್ನಾಳ್ ವಿಜಯಪುರ ಜಿಲ್ಲೆಯಲ್ಲಿ ಗೆದ್ದ ಒಬ್ಬರೇ ಬಿಜೆಪಿ ಶಾಸಕರಾಗಿದ್ದಾರೆ.
ಇದೀಗ ಆರು ವರ್ಷ: ಫೆ.10 ರಂದು ನೀಡಿದ್ದ ಶೋಕಾಸ್ ನೋಟಿಸ್ಗೆ ನೀವು ನೀಡಿದ್ದ ಉತ್ತರವನ್ನು ಪರಿಗಣಿಸಿದ್ದೇವೆ. ಉತ್ತಮ ನಡವಳಿಕೆಯ ಬಗ್ಗೆ ತಾವು ನೀಡಿರುವ ಆಶ್ವಾಸನೆಯ ಬಳಿಕವೂ ಪದೇ ಪದೇ ಶಿಸ್ತು ನಿಯಮ ಉಲ್ಲಂಘನೆ ಮಾಡಿರುವುದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಈ ಕಾರಣದಿಂದಲೇ ಪಕ್ಷದಿಂದ ಆರು ವರ್ಷ ಉಚ್ಚಾಟನೆ ಮಾಡುತ್ತಿರುವುದಾಗಿ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ಶಾಸಕ ಯತ್ನಾಳ್ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಪಕ್ಷದ ಇತರ ಜವಾಬ್ದಾರಿಗಳಿಂದಲೂ ಅವರನ್ನು ತೆಗೆಯಲಾಗಿದೆ ಎಂದಿದ್ದಾರೆ.
Laxmi News 24×7