ಬಂಟ್ವಾಳ(ದಕ್ಷಿಣ ಕನ್ನಡ): ಜಿಲ್ಲೆಯ ಕಾರಿಂಜ ಬೆಟ್ಟವು ರಾಜ್ಯದ ಅತಿ ಎತ್ತರದ ಬೆಟ್ಟಗಳಲ್ಲೊಂದು. ಈ ಬೆಟ್ಟವನ್ನು ಭಾನುವಾರ ಬೆಳಗ್ಗೆ ಕರ್ನಾಟಕದ ಸ್ಪೈಡರ್ಮ್ಯಾನ್ ಎಂದೇ ಹೆಸರುವಾಸಿಗಿರುವ ಚಿತ್ರದುರ್ಗದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಅವರು ಕೆಲವೇ ನಿಮಿಷಗಳಲ್ಲಿ ಏರುವ ಮೂಲಕ ಗಮನ ಸೆಳೆದರು. ಮೊದಲ ಬಾರಿಗೆ ಈ ಬೆಟ್ಟವನ್ನೇರಿದ ಜ್ಯೋತಿರಾಜ್ ಸಾಹಸಕ್ಕೆ ನೆರೆದಿದ್ದ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾನುವಾರ ಬೆಳಗ್ಗೆ 10 ಗಂಟೆಗೆ ಪುರಾಣ ಪ್ರಸಿದ್ಧ ಕಾರಿಂಜೇಶ್ವರನ ಬೆಟ್ಟದ ಮೇಲೆ ಹತ್ತಲು ಆರಂಭಿಸಿದ ಜ್ಯೋತಿರಾಜ್, ಸುಡುವ ಬಿಸಲನ್ನೂ ಲೆಕ್ಕಿಸದೆ ಕೇವಲ ಅರ್ಧ ಗಂಟೆಗೂ ಕಡಿಮೆ ಅವಧಿಯಲ್ಲೇ ಬೆಟ್ಟದ ಮೇಲಿನ ಈಶ್ವರನ ದೇವಾಲಯದ ಮುಂದೆ ತಲುಪಿ ದೇವರಿಗೆ ನಮಸ್ಕರಿಸಿದರು. ನೋಡ ನೋಡುತ್ತಿದ್ದಂತೆ ಬೆಟ್ಟ ಏರಿದ ಜ್ಯೋತಿರಾಜ್ ಅವರ ಕಸರತ್ತು ಜನರ ಮೈಜುಮ್ಮೆನಿಸುವಂತಿತ್ತು.
350 ಅಡಿ ಎತ್ತರದ ಬಂಡೆ: ಜ್ಯೋತಿರಾಜ್ ಏರಿದ ಕಾರಿಂಜ ಬೆಟ್ಟದ ಬೃಹತ್ ಬಂಡೆಯು ಸುಮಾರು 350 ಅಡಿ ಎತ್ತರವಿದೆ. ಯೂಟ್ಯೂಬ್ನಲ್ಲಿ ಶಿವರಾತ್ರಿ ಹಬ್ಬದ ವಿಡಿಯೋ ನೋಡುತ್ತಿದ್ದಾಗ ಕಾರಿಂಜ ಕ್ಷೇತ್ರದ ಕುರಿತು ತಿಳಿದಿದ್ದ ಅವರು, ಸಾಕಷ್ಟು ಜನರ ಬೇಡಿಕೆಯಂತೆ ಬೆಟ್ಟ ಹತ್ತಲು ನಿರ್ಧರಿಸಿದ್ದರು. ಶನಿವಾರವೇ ಇದಕ್ಕಾಗಿ ಪ್ರಾಕ್ಟೀಸ್ ಕೂಡ ಮಾಡಿದ್ದರು. ಆಗ ಬೆಟ್ಟವೇರಲು ಒಂದು ತಾಸು ತೆಗೆದುಕೊಂಡಿದ್ದ ಅವರು, ಭಾನುವಾರ ಅರ್ಧ ಗಂಟೆಯಲ್ಲೇ ಕ್ರಮಿಸಿದರು.
ಸ್ಪೋರ್ಟ್ಸ್ ಕ್ಲಬ್ ನಿರ್ಮಾಣದ ಕನಸು: ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ”ಬಡವರ ಕಲ್ಯಾಣಕ್ಕಾಗಿ ಟ್ರಸ್ಟ್ವೊಂದನ್ನು ನಡೆಸುತ್ತಿದ್ದು, ಅದರಿಂದ ಇನ್ನಷ್ಟು ಸಮಾಜಸೇವೆ ಮಾಡಲು ಆರ್ಥಿಕ ಸಹಾಯಧನ ಅಗತ್ಯವಿದೆ. ಯುವ ಜನಾಂಗವು ದಾರಿ ತಪ್ಪುವ ಈ ಕಾಲಘಟ್ಟದಲ್ಲಿ ಅವರಿಗೆ ಸರಿಯಾದ ದಿಕ್ಕಿನಲ್ಲಿ ತರಬೇತಿ ನೀಡಿ, ಅವರನ್ನು ಕ್ರೀಡೆಯಲ್ಲಿ ಸಾಧನೆ ಮಾಡುವಂತೆ ಪ್ರೇರೇಪಿಸಬೇಕೆಂಬ ಹಂಬಲವಿದೆ. ಅದಕ್ಕಾಗಿ ಎಲ್ಲಿಯಾದರೂ 2 ಎಕರೆಯಷ್ಟು ಜಮೀನು ಖರೀದಿಸಿ, ಸ್ಪೋರ್ಟ್ಸ್ ಕ್ಲಬ್ ಸಂಸ್ಥೆ ನಿರ್ಮಿಸಬೇಕೆಂಬ ಕನಸಿದೆ. ಇದಕ್ಕಾಗಿ ಅರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದೇನೆ. ಇದೇ ಉದ್ದೇಶದಿಂದ ಬಂಟ್ವಾಳಕ್ಕೂ ಬಂದಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯ ಜನತೆ ನನಗೆ ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.
Laxmi News 24×7