ಬೆಂಗಳೂರು: ಬಳ್ಳಾರಿ ಜಿಲ್ಲೆಯ ಮೆಣಸಿನಕಾಯಿ ಬೆಳೆಗಾರರು ಹಿಂದೆಂದೂ ಇಲ್ಲದಂತಹ ಸಂಕಷ್ಟದಲ್ಲಿ ಸಿಲುಕಿದ್ದು, ಕೇಂದ್ರ ಸರ್ಕಾರ ತಾರತಮ್ಯದ ಧೋರಣೆಯಿಂದಾಗಿ ಸರಣಿ ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶಕ್ಕೆ ಸಿಲುಕಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಜೆ.ಎನ್.ಗಣೇಶ್ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೆಣಸಿನಕಾಯಿ ಬೆಳೆಗಾರರು ಸದ್ಯದ ಪರಿಸ್ಥಿತಿಯಲ್ಲಿ ಎದುರಿಸುತ್ತಿರುವ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಪಕ್ಕದ ಆಂಧ್ರಪ್ರದೇಶದ ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಬಂದಿದೆ. ಬಳ್ಳಾರಿ ಜಿಲ್ಲೆಯ ರೈತರನ್ನು ಕಡೆಗಣಿಸುವ ಮೂಲಕ ಕರ್ನಾಟಕವನ್ನು ನಿರ್ಲಕ್ಷಿಸಿದೆ ಎಂದು ಹೇಳಿದರು.
ನಮ್ಮ ನೆರವಿಗೆ ಬನ್ನಿ: ಬಳ್ಳಾರಿ ಜಿಲ್ಲೆಯ ಶಿರಗುಪ್ಪ, ಸಂಡೂರು, ಕುರಗೋಡ, ಕಂಪ್ಲಿ ಸೇರಿದಂತೆ ಎಲ್ಲೆಡೆ ಮೆಣಸಿನಕಾಯಿ ಪ್ರಮುಖ ಬೆಳೆಯಾಗಿದೆ. ಪ್ರಸ್ತುತ ಕ್ವಿಂಟಲ್ಗೆ ಕೇವಲ 7 ರಿಂದ 8 ಸಾವಿರ ಬೆಲೆ ಮಾತ್ರ ದೊರೆಯುತ್ತಿದ್ದು, ಈ ಪರಿ ಕುಸಿತದಿಂದಾಗಿ ಬೆಳೆಗಾರರು ಜೀವನದ ಆಸೆಯನ್ನೇ ಬಿಟ್ಟಿದ್ದಾರೆ. ಈಗಾಗಲೇ ಹತ್ತಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಗೆ ತಾಗಿಕೊಂಡಿರುವ ನೆರೆಯ ಆಂಧ್ರಪ್ರದೇಶದ ಬೆಳೆಗಾರರಿಗೂ ಇದೇ ಪರಿಸ್ಥಿತಿ ಎದುರಾಗಿತ್ತು. ಅಲ್ಲಿನ ಸರ್ಕಾರ ಬೀರಿದ ಪ್ರಭಾವದಿಂದಾಗಿ ಕೇಂದ್ರ ಸರ್ಕಾರ 11,781 ರೂಪಾಯಿ ಬೆಂಬಲ ಬೆಲೆಯನ್ನು ನೀಡುತ್ತಿದೆ ಎಂದರು.
Laxmi News 24×7