ಬೆಳಗಾವಿ : ಚಳಿಗಾಲ ಅಧಿವೇಶನ ವೇಳೆ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಪ್ರಕರಣದಲ್ಲಿ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಅವರನ್ನು ಬಂಧನ ಮಾಡಿದ್ದ ಬೆಳಗಾವಿ ಡಿಸಿಪಿ ಮತ್ತು ಎಸಿಪಿ ಅವರು ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ವಿಧಾನ ಪರಿಷತ್ನಲ್ಲಿ ಅಶ್ಲೀಲ ಪದ ಬಳಕೆ ಮಾಡಿರುವ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಬೆಳಗಾವಿ ಪೊಲೀಸರು, ಸಿ ಟಿ ಅವರನ್ನು ಬಂಧಿಸಿದ್ದರು. ಇದಾದ ಬಳಿಕ ಪ್ರಕರಣ ಸಿಐಡಿಗೆ ವರ್ಗಾವಣೆ ಆಗಿತ್ತು. ಇದೀಗ ಸಿಐಡಿ ಅಧಿಕಾರಿಗಳು ಸಿ ಟಿ ರವಿ ಅವರನ್ನು ಬಂಧನ ಮಾಡಿದ್ದ ಡಿಸಿಪಿ ರೋಹನ ಜಗದೀಶ ಮತ್ತು ಎಸಿಪಿ ಸದಾಶಿವ ಕಟ್ಟಿಮನಿ ಅವರು ಇಂದು ಬೆಂಗಳೂರಿನಲ್ಲಿ ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನದ ಕೊನೆ ದಿನ ಪರಿಷತ್ನಲ್ಲಿ ನಡೆದ ಗಲಾಟೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ಸುವರ್ಣ ವಿಧಾನಸೌಧ ಮುಂಭಾಗದಿಂದ ಸಿ ಟಿ ರವಿ ಬಂಧನವಾಗಿತ್ತು. ಪ್ರಕರಣದ ಬಳಿಕ ಸಾಕಷ್ಟು ಆರೋಪ ಪ್ರತ್ಯಾರೋಪಗಳು ಕೇಳಿ ಬಂದಿದ್ದವು.ಘಟನೆ ಬಳಿಕ ಅಂದು ಡಿಸಿಪಿ ರೋಹನ್ ಜಗದೀಶ್, ಎಸಿಪಿ ಸದಾಶಿವ ಕಟ್ಟಿಮನಿ ನೇತೃತ್ವದ ತಂಡವು ಖಾನಾಪುರ ಪೊಲೀಸ್ ಠಾಣೆಗೆ ಸಿ ಟಿ ರವಿ ಕರೆದುಕೊಂಡು ಹೋಗಿದ್ದರು. ನಂತರ ಇಡೀ ರಾತ್ರಿ ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆ ಗಡಿವರೆಗೂ ಸುತ್ತಾಡಿಸಿದ್ದರೆಂದು ಸಿ ಟಿ ರವಿ ಆರೋಪಿಸಿದ್ದರು. ಇದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ಪ್ರಕರಣದ ಕುರಿತು ಡಿಸಿಪಿ ರೋಹನ್ ಜಗದೀಶ್, ಎಸಿಪಿ ಸದಾಶಿವ ಕಟ್ಟಿಮನಿ ಅವರು ಸಿಐಡಿ ಮುಂದೆ ಹಾಜರಾಗಿದ್ದು, ಸಿ ಟಿ ರವಿ ಬಂಧನ, ಬಿಡುಗಡೆವರೆಗಿನ ಮಾಹಿತಿಯನ್ನು ಸಿಐಡಿ ಅಧಿಕಾರಿಗಳಿಗೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Laxmi News 24×7