ಬೆಳಗಾವಿ: ರಾಜ್ಯಾದ್ಯಂತ ಮಾರ್ಚ್ 21 ರಿಂದ ಏಪ್ರಿಲ್ 04 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲಿದ್ದು, ಜಿಲ್ಲೆಯಲ್ಲಿ ಪರೀಕ್ಷೆಗಳು ಸುಗಮವಾಗಿ ನಡೆಸಲು ನಿಯೋಜಿತ ಅಧಿಕಾರಿ, ಸಿಬ್ಬಂದಿಗಳು ಸಮಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ (ಮಾ.15) ನಡೆದ 2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1 ರ ಕುರಿತು ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬೆಳಗಾವಿ 518, ಚಿಕ್ಕೋಡಿ 601 ಒಟ್ಟು 1119 ಪ್ರೌಡ ಶಾಲೆಗಳಿದ್ದು, ಪರೀಕ್ಷಾ ಕೇಂದ್ರಗಳ ಸಂಖ್ಯೆ 227 ಕೇಂದ್ರಗಳಿವೆ. ಬೆಳಗಾವಿ 34863 ಹಾಗೂ ಚಿಕ್ಕೋಡಿ 46539 ಒಟ್ಟು 81402 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿದ್ದಾರೆ ಎಂದರು.
ಪರೀಕ್ಷೆ ಸುಗಮವಾಗಿ ನಡೆಸಲು ನಿಯೋಜಿತ ಅಧಿಕಾರಿ ಸಿಬ್ಬಂದಿಗಳು ಪರೀಕ್ಷಾ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಪರೀಕ್ಷೆ ಯಶಸ್ವಿ ಗೊಳಿಸುವ ಸಂಪೂರ್ಣ ಜವಾಬ್ದಾರಿ ನಿಯೋಜಿತ ಸಿಬ್ಬಂದಿಗಳ ಮೇಲಿದೆ. ಪ್ರತಿ ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಚಲನೆ ಕುರಿತು ನಿರಂತರ ನಿಗಾ ವಹಿಸಬೇಕು.