ಬೆಳಗಾವಿ : ಬೆಳಗಾವಿಯಲ್ಲಿ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಹಾಗೂ ಚಾಲಕರ ಮೇಲೆ ನಡೆದ ಹಲ್ಲೆ ಆರೋಪ ಪ್ರಕರಣದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ (ಬೆಳಗಾವಿ) ಬರುವ ಬಸ್ಗಳ ಸಂಖ್ಯೆ ಶನಿವಾರ ಕಡಿಮೆಯಾಗಿತ್ತು. ಸದ್ಯಕ್ಕೆ ಗಡಿವರೆಗೆ ಮಾತ್ರ ಬಸ್ಗಳು ಓಡಾಡುತ್ತಿವೆ ಎಂದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ ಮಾಹಿತಿ ನೀಡಿದ್ದಾರೆ.
ಕೊಲ್ಹಾಪುರ ಮಾರ್ಗವಾಗಿ ಪ್ರತಿದಿನವೂ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯಿಂದ 30 ಬಸ್ ಬರುತ್ತಿದ್ದವು. ಆದರೆ, ಶನಿವಾರ 20 ಬಸ್ ಮಾತ್ರ ಬಂದಿವೆ. ಇದರಲ್ಲಿ ಮೂರು ಬಸ್ಗಳು ಕೇಂದ್ರ ಬಸ್ ನಿಲ್ದಾಣ ಪ್ರವೇಶಿಸಿವೆ. ಉಳಿದ ಬಸ್ಗಳ ಚಾಲಕರು ಪ್ರಯಾಣಿಕರನ್ನು ನಗರದಿಂದ ದೂರದಲ್ಲೇ ಇಳಿಸಿ ವಾಪಸ್ ಹೋಗಿದ್ದಾರೆ ಎಂದು ತಿಳಿಸಿದರು.
ಮುಂಬೈ, ಪುಣೆ, ಕೊಲ್ಹಾಪುರ, ಮೀರಜ್ ಮಾರ್ಗವಾಗಿ ಬೆಳಗಾವಿಯಿಂದ ನಿತ್ಯ 90 ಬಸ್ಗಳು ಓಡುತ್ತವೆ. ಶನಿವಾರ ಕೂಡ ಎಲ್ಲ ಬಸ್ಗಳನ್ನೂ ಬಿಡಲಾಗಿದೆ. ಎಲ್ಲಿಯೂ ಯಾವುದೇ ಸಮಸ್ಯೆ ಆಗಿಲ್ಲ. ಕರ್ನಾಟಕ – ಮಹಾರಾಷ್ಟ್ರ ಗಡಿಗಳಲ್ಲಿ ಎರಡೂ ಕಡೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಬಸ್ಗಳ ಸುರಕ್ಷತೆಗೆ ತೀವ್ರ ನಿಗಾ ವಹಿಸಿದ್ದಾರೆ ಎಂದು ರಾಜೇಶ ಹುದ್ದಾರ ಹೇಳಿದರು.
Laxmi News 24×7