ಹಾಸನ: ಜೈಲಿಗೆ ಹೋಗಿ ಬಂದರೂ ಯಡಿಯೂರಪ್ಪರಿಗೆ ಬುದ್ಧಿ ಇಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಿಎಂ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.ಇಂದು ಹಾಸನದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪರವರೇ ನಾವು ಹೋರಾಟದ ಮೂಲಕ ಜೈಲಿಗೆ ಹೋಗುತ್ತಿದ್ದೇವೆ. ನಿಮ್ಮ ಹಾಗೆ ಬೇರೆಯದಕ್ಕೆ ಜೈಲಿಗೆ ಹೋಗಿಲ್ಲ. ನಾಳೆ ಕೇರಳ ಮತ್ತು ತಮಿಳುನಾಡಿನವರು ಪ್ರಾಧಿಕಾರ ಮಾಡಲು ಕೇಳಬಹುದು. ಎಲ್ಲರೂ ಪ್ರಾಧಿಕಾರ ಮಾಡಿ ಎಂದು ಹೇಳ್ತಾರೆ ಆಗ ಪ್ರಾಧಿಕಾರ ಮಾಡ್ತೀರಾ ಎಂದು ಪ್ರಶ್ನೆ ಮಾಡಿದರು.
ಗೋವಾದಲ್ಲಿ ಶೇ 40ರಷ್ಟು ಕನ್ನಡಿಗರಿದ್ದಾರೆ. ಕನ್ನಡ ಪ್ರಾಧಿಕಾರವನ್ನು ಅಲ್ಲಿನ ಸರ್ಕಾರದವರು ಮಾಡುತ್ತಾರಾ? ನೀವು ಈ ಪ್ರಾಧಿಕಾರ ಮಾಡಿರುವುದು ಅಕ್ಷಮ್ಯ ಅಪರಾಧ. ಪ್ರಾಧಿಕಾರ ಮಾಡಲು ನೀಡಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ನಾವು ಜೈಲಿಗೂ ಹೋಗುತ್ತೇವೆ. ನ್ಯಾಯಾಲಯದ ಮೊರೆ ಹೋಗಲು ತೀರ್ಮಾನ ಮಾಡಿದ್ದೇವೆ. ಡಿಸೆಂಬರ್ 5 ಕನ್ನಡಿಗರು ಮತ್ತು ಯಡಿಯೂರಪ್ಪರ ನಡುವಿನ ಸವಾಲ್‍ಗೆ ಸಾಕ್ಷಿಯಾಗಲಿದೆ. ಡಿಸೆಂಬರ್ 5ರಂದು ನೂರಕ್ಕೆ ನೂರು ಎಲ್ಲವೂ ಬಂದ್ ಆಗಬೇಕು ಎಂದರು.
ಕನ್ನಡಪರ ಸಂಘಟನೆಗಳು ಬಹಿರಂಗವಾಗಿ ಬೆಂಬಲ ನೀಡಿದ್ದಾರೆ. ಹೋಟೆಲ್ ಮಾಲೀಕರು ಬೆಂಬಲ ಕೊಡಲೇಬೇಕು. ಬಸ್ ನಿಲ್ದಾಣಕ್ಕೆ ಜನರು ಬರಬೇಡಿ, ಟ್ಯಾಕ್ಸಿ ಆಟೋ, ತರಕಾರಿ ಮತ್ತು ಫುಟ್ ಪಾತ್ ಅಂಗಡಿಯವರು ಬಂದ್‍ಗೆ ಬೆಂಬಲ ನೀಡಿದ್ದಾರೆ. ಚಿತ್ರದುರ್ಗ, ಸಿದ್ದಗಂಗಾ ಮಠ ಸೇರಿ ಎಲ್ಲ ಮಠಗಳೂ ಈ ಮರಾಠ ಪ್ರಾಧಿಕಾರ ಮಾಡದಂತೆ ಹೇಳಿದ್ದಾರೆ. ನ್ಯಾಯಾಲಯ ಮತ್ತು ವಕೀಲರು ಕನ್ನಡಿಗರ ಪರವಾಗಿ ನಿಂತಿದ್ದಾರೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.