ಬೆಳಗಾವಿ: ಗಡಿ ಜಿಲ್ಲೆಯ ಕಲಾವಿದರು, ಸಾಹಿತಿಗಳು, ಪ್ರೇಕ್ಷಕರು ಎರಡು ದಶಕಗಳಿಂದ ಕಾಣುತ್ತಿದ್ದ ಕನಸು ಕೊನೆಗೂ ಕೈಗೂಡಿದೆ. ಸಾರಸ್ವತ ಲೋಕದ ಕೇಂದ್ರವಾಗಿ ಕನ್ನಡ ಭವನ ರಂಗಮಂದಿರ ತಲೆಎತ್ತಿದೆ. ಡಿ.27ರಿಂದ ಸಾಂಸ್ಕೃತಿಕ ವೇದಿಕೆಯಾಗಿ ತೆರೆದುಕೊಳ್ಳಲಿದೆ.
ಕುಂದಾನಗರಿಯ ನೆಹರೂ ನಗರದಲ್ಲಿ ಈ ಭವನ ನಿರ್ಮಿಸಲಾಗಿದೆ. ಶ್ರೀಕೃಷ್ಣದೇವರಾಯ ವೃತ್ತದಿಂದ ತುಸು ಮುಂದಕ್ಕೆ ಹೋಗಿ, ಬಲಕ್ಕೆ ತಿರುಗಿದರೆ ರಾಮದೇವ ಹೋಟೆಲ್ ಹಿಂಭಾಗದಲ್ಲಿ ಭವನವಿದೆ. ಹೊರಗಡೆಯಿಂದ ಕಣ್ಹಾಯಿಸಿದರೆ ಹೈಟೆಕ್ ಕಟ್ಟಡದಂತೆ ಕಾಣುವ ಈ ಭವನ ಎಲ್ಲ ಆಧುನಿಕ ಸೌಕರ್ಯಗಳನ್ನೂ ಒಳಗೊಂಡಿದೆ.
ಮೂರು ಅಂತಸ್ತಿನ ಕಟ್ಟಡದ ಹೊರಭಾಗ ಕಲರ್‌ಫುಲ್ ಗಾಜುಗಳಿಂದ ಕಂಗೊಳಿಸುತ್ತದೆ. ಶಬ್ದನಿರೋಧಕ ಕಿಟಗಿ ಅಳವಡಿಸಿದ್ದು ಇದರ ವಿಶೇಷ. ವಾಹನಗಳ ಓಡಾಟದ ಸದ್ದು ಒಳಗೆ ಕೇಳಿಸದಂತೆ, ಒಳಗಿನ ಧ್ವನಿವರ್ಧಕದ ಶಬ್ದ ಹೊರಗಿನವರಿಗೆ ತೊಂದರೆ ಮಾಡದಂತೆ ಕೌಶಲ ಬಳಸಲಾಗಿದೆ.
ಕೆಳಮಹಡಿಯಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದ್ದು 50ಕ್ಕೂ ಹೆಚ್ಚು ಕಾರುಗಳು ನಿಲ್ಲುವಷ್ಟು ಜಾಗವಿದೆ. ನೆಲಮಹಡಿಯಲ್ಲಿ 10 ಮಳಿಗೆಗಳನ್ನು ಮಾಡಿದ್ದು, ಬಾಡಿಗೆ ಕೊಟ್ಟು ಆ ಆದಾಯದಲ್ಲಿ ಭವನ ನಿರ್ವರ್ಹಿಸಲು ಉದ್ದೇಶಿಸಲಾಗಿದೆ. ಮೊದಲ ಮಹಡಿಯಲ್ಲಿ ವಿಶಾಲವಾದ ಪ್ರಾಂಗಣವಿದ್ದು, ಅಲ್ಲಿಯೇ ರಂಗಮಂದಿರ ನಿರ್ಮಿಸಲಾಗಿದೆ.
ಒಳಗಡೆ ಏನೇನಿದೆ?: 310 ಕುರ್ಚಿಗಳನ್ನು ಒಳಗೊಂಡ ಈ ರಂಗಮಂದಿರ ಸಂಪೂರ್ಣ ಹವಾನಿಯಂತ್ರಿತವಾಗಿದೆ. ಫೋಲ್ಡಿಂಗ್ ಕುರ್ಚಿಗಳು, ಪ್ರತಿಧ್ವನಿ ನಿಯಂತ್ರಣ ಕೌಶಲ, ಅತ್ಯಾಧುನಿಕ ಸೌಂಡ್ ಸಿಸ್ಟಂ, ವೇದಿಕೆಗೆ ಬೇಕಾದ ಧ್ವನಿ- ಬೆಳಕಿನ ಸೌಲಭ್ಯ, ಲೈಟಿಂಗ್, ನೇಪಥ್ಯದ ಕೋಣೆಗಳು, ಪರದೆ ಇಳಿಬಿಡುವ ಚಕ್ರಗಳ ಸಿದ್ಧತೆ ಹೀಗೆ ಪ್ರತಿಯೊಂದನ್ನೂ ಅಚ್ಚುಕಟ್ಟಾಗಿ ಸಿದ್ಧಗೊಳಿಸಲಾಗಿದೆ. ರಂಗಾಸಕ್ತರು, ಕಲಾಸಕ್ತರು ಒಳಗೆ ಕಾಲಿಟ್ಟ ತಕ್ಷಣ ಮಲ್ಟಿಫೆಕ್ಸ್ ಥೇಟರ್‌ನಂತೆ ಆಲಿಂಗಿಸುತ್ತದೆ.
ಎರಡನೇ ಮಹಡಿಯಲ್ಲಿ ಮಹಿಳಾ ಹಾಗೂ ಪುರುಷ ಕಲಾವಿದರ ಅಲಂಕಾರಕ್ಕಾಗಿ ಪ್ರತ್ಯೇಕ ಮೇಕಪ್ ರೂಮುಗಳಿವೆ. ದೂರದಿಂದ ಬರುವ ಕಲಾವಿದರು, ಸಾಹಿತಿಗಳಿಗಾಗಿ ತಂಗಲು ಆರು ಪ್ರತ್ಯೇಕ ಕೊಠಡಿಗಳನ್ನು ಬೆಡ್ ಸಮೇತ ನಿರ್ಮಿಸಲಾಗಿದ್ದು, ಎಲ್ಲವೂ ಹವಾನಿಯಂತ್ರಿತವಾಗಿವೆ. 12 ಮಂದಿ ತಂಗವಷ್ಟು ಸ್ಥಳಾವಕಾಶವಿದೆ.