Breaking News
Home / ರಾಜಕೀಯ / ಬದಲಾದೀತೇ ಗುಜರಾತ್‌ ಗಾದಿ? ನಾಳೆ ಮೋದಿ ತವರಿನಲ್ಲಿ 2ನೇ ಹಂತದ ಮತದಾನ

ಬದಲಾದೀತೇ ಗುಜರಾತ್‌ ಗಾದಿ? ನಾಳೆ ಮೋದಿ ತವರಿನಲ್ಲಿ 2ನೇ ಹಂತದ ಮತದಾನ

Spread the love

ದೇಶದಲ್ಲಿ ಭಾರೀ ಸದ್ದು ಮಾಡಿದ್ದ ಗುಜರಾತ್‌ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಒಂದು ತಿಂಗಳಿನಿಂದ ಬಿಜೆಪಿ, ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಪಕ್ಷಗಳು ಜನಮನ್ನಣೆ ಗಳಿಸಿಕೊಳ್ಳುವುದಕ್ಕಾಗಿ ಇನ್ನಿಲ್ಲದ ಶ್ರಮ ಪಟ್ಟಿವೆ. ಬಿಜೆಪಿ ಪ್ರಚಾರಕ್ಕೆ ಪ್ರಧಾನಿ ಮೋದಿಯವರೇ ನೇತೃತ್ವ ವಹಿಸಿಕೊಂಡಿದ್ದರೆ, ಎಎಪಿಗೆ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಮುಂದಾಳತ್ವ ವಹಿಸಿದ್ದರು.

ಕಾಂಗ್ರೆಸ್‌ ಮಾತ್ರ ದಿಲ್ಲಿ ನಾಯಕರನ್ನು ನಂಬಿಕೊಳ್ಳದೆ ಸಾಮೂಹಿಕ ನಾಯಕತ್ವದಡಿ ಪ್ರಚಾರ ನಡೆಸಿದೆ.

ಹಿಂದಿನ ಸಂಖ್ಯೆ ಹೆಚ್ಚು ಮಾಡಿಕೊಂಡೀತೇ ಬಿಜೆಪಿ?
27 ವರ್ಷಗಳಿಂದ ಗುಜರಾತ್‌ನಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಪಕ್ಷ ಬಿಜೆಪಿಗೆ ಇದು ಭಾರೀ ಮಹತ್ವದ ಚುನಾವಣೆ. ಹೀಗಾಗಿ ಮೋದಿಯವರೇ ಪ್ರಚಾರದ ನೇತೃತ್ವ ವಹಿಸಿದ್ದರು. ಸುಮಾರು 31 ರ್ಯಾಲಿಗಳು, ಬಹಿರಂಗ ಸಭೆಗಳನ್ನು ನಡೆಸಿದ ಪ್ರಧಾನಿ, ತಮ್ಮ ಭಾಷಣದಲ್ಲಿ ಕಾಂಗ್ರೆಸ್‌ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ.

ಅದರಲ್ಲೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಳಸಿದ “ಮೋದಿ 100 ತಲೆಯ ರಾವಣ’ ಎಂಬ ಹೇಳಿಕೆಯನ್ನು ಮುಂದಿಟ್ಟುಕೊಂಡು ನರೇಂದ್ರ ಮೋದಿಯವರು ಪ್ರಚಾರ ನಡೆಸಿದರು. ಬೇರೆಯವರಿಗೆ ಮತ ಹಾಕಿ ಗುಜರಾತ್‌ ಹಿರಿಮೆಯನ್ನು ಬಲಿ ಕೊಡಬೇಡಿ ಎಂದೂ ಜನರಲ್ಲಿ ಮನವಿ ಮಾಡಿಕೊಂಡರು. ಅಹ್ಮದಾಬಾದ್‌ನಲ್ಲಿ 50 ಕಿ.ಮೀ. ದೂರ ರ್ಯಾಲಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಸಾಥ್‌ ನೀಡಿದರು.

ಕಳೆದ ಫ‌ಲಿತಾಂಶ ಮೀರಿಸೀತೇ ಕಾಂಗ್ರೆಸ್‌?
1995ರ ಬಳಿಕ ಬಿಜೆಪಿಗೆ ಎದುರಾದ ಅತ್ಯಂತ ಕ್ಲಿಷ್ಟಕರ ಚುನಾವಣೆ 2017ರದ್ದು. ಆಗ ಬಿಜೆಪಿಗೆ ಸಮಬಲದ ಹೋರಾಟ ನೀಡಿದ್ದ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಅಧಿಕಾರಕ್ಕೇರುವ ಸಾಧ್ಯತೆಗಳು ಹೆಚ್ಚಾಗಿದ್ದವು. ಆಗಿನ ಪಾಟೀದಾರ್‌ ಹೋರಾಟದ ಹಾರ್ದಿಕ್‌ ಪಟೇಲ್‌, ಜಿಗ್ನೇಶ್‌ ಮೆವಾನಿ, ಅಲ್ಪೇಶ್‌ ಠಾಕೂರ್‌ರಂಥ ನಾಯಕರು ಬಿಜೆಪಿಗೆ ಭಾರೀ ಸ್ಪರ್ಧೆ ನೀಡಿದ್ದರು. ಈ ಬಾರಿ ಕಾಲ ಬದಲಾಗಿದ್ದು, ಹಾರ್ದಿಕ್‌ ಪಟೇಲ್‌, ಅಲ್ಪೇಶ್‌ ಠಾಕೂರ್‌ ಬಿಜೆಪಿಯಲ್ಲಿದ್ದಾರೆ. ಜಿಗ್ನೇಶ್‌ ಮೆವಾನಿ ಕಾಂಗ್ರೆಸ್‌ನಲ್ಲೇ ಉಳಿದಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಭಾರತ್‌ ಜೋಡೋ ಯಾತ್ರೆಯಲ್ಲಿರುವ ರಾಹುಲ್‌ ಗಾಂಧಿ ಈ ಬಾರಿ ಚುನಾವಣ ಪ್ರಚಾರದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ನ. 21ರಂದು ರಾಜ್‌ಕೋಟ್‌ ಮತ್ತು ಮೆಹುವಾಗೆ ಬಂದಿದ್ದ ರಾಹುಲ್‌ ಗಾಂಧಿ ಎರಡು ಬಹಿರಂಗ ಪ್ರಚಾರ ಸಭೆಗಳಲ್ಲಿ ಭಾಗಿಯಾಗಿ ವಾಪಸ್‌ ಹೋದರು. ಪ್ರಿಯಾಂಕಾ ವಾದ್ರಾ ಕೂಡ ಪ್ರಚಾರದಲ್ಲಿ ಕಾಣಿಸಿಕೊಳ್ಳಲಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಚಾರ ನಡೆಸಿದರು. ಇಲ್ಲಿ ಸಂಪೂರ್ಣವಾಗಿ ಸ್ಥಳೀಯ ನಾಯಕರೇ ಹೋರಾಟ ನಡೆಸಿದರು ಎಂಬುದು ಗಮನಾರ್ಹ.

ನಾಳೆ ಮತದಾನ
ಗುಜರಾತ್‌ನಲ್ಲಿ ಸೋಮವಾರ 2ನೇ ಹಂತದ ಚುನಾವಣೆ ನಡೆಯಲಿದೆ. ಒಟ್ಟು 93 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಡಿ. 8ರಂದು ಗುಜರಾತ್‌ ಮತ್ತು ಈಗಾಗಲೇ ಚುನಾವಣೆ ಮುಗಿದಿರುವ ಹಿಮಾಚಲ ಪ್ರದೇಶದ ಫ‌ಲಿತಾಂಶ ಪ್ರಕಟವಾಗಲಿದೆ.

ಹೊಸ ಇತಿಹಾಸ ಬರೆದೀತೇ ಆಪ್‌?
ಸೂರತ್‌ ನಗರಪಾಲಿಕೆ ಚುನಾವಣೆಯಲ್ಲಿ ದಾಖಲೆಯ 27 ಸ್ಥಾನಗಳನ್ನು ಗೆದ್ದು ಗುಜರಾತ್‌ನಲ್ಲೂ ಛಾಪು ಮೂಡಿಸಿದ್ದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಪ್‌ ಪಕ್ಷ ಗಾಂಧೀ ನಾಡಿನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಬಿಜೆಪಿಗೆ ಠಕ್ಕರ್‌ ನೀಡುವಂತೆ ಅರವಿಂದ್‌ ಕೇಜ್ರಿವಾಲ್‌, ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಮತ್ತು ಮನೀಶ್‌ ಸಿಸೋಡಿಯಾ ಅವರು ಗುಜರಾತ್‌ನ ಪ್ರಚಾರದ ವೇದಿಕೆಗಳಲ್ಲಿ ಬೆವರಿಳಿಸಿದರು. ಅದರಲ್ಲೂ ಪ್ರಚಾರದ ಕೊನೆಯ ಘಟ್ಟದಲ್ಲಿ ಸೂರತ್‌ನ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ಅರವಿಂದ್‌ ಕೇಜ್ರಿವಾಲ್‌ ರೋಡ್‌ ಶೋ ನಡೆಸಿದ್ದಾರೆ. ಅಂದ ಹಾಗೆ ಗುಜರಾತ್‌ನಲ್ಲಿ ಕೇಜ್ರಿವಾಲ್‌ 19 ರ್ಯಾಲಿಗಳನ್ನು ನಡೆಸಿದ್ದಾರೆ.


Spread the love

About Laxminews 24x7

Check Also

ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹೆತ್ತ ಕಂದಮ್ಮಗಳನ್ನೇ ವಿಷಪ್ರಾಶನ ಮಾಡಿಸಿ ಕೊಂದ ತಾಯಿ

Spread the love ಮಂಡ್ಯ: ಐಸ್ ಕ್ರೀಂ ಸೇವಿಸಿದ್ದ ಅವಳಿ ಮಕ್ಕಳಿಬ್ಬರೂ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೆತ್ತ ತಾಯಿಯೇ ವಿಷವುಣಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ