ಬೆಂಗಳೂರು: ಸ್ಯಾಂಡಲ್‍ವುಡ್ ಹಾಸ್ಯ ನಟ ಬುಲೆಟ್ ಪ್ರಕಾಶ್ ನಿಧನಕ್ಕೆ ನಟ ಕಿಚ್ಚ ಸುದೀಪ್ ಸಂತಾಪ ಸೂಚಿಸಿದ್ದು, ಕೊನೆಯ ಬಾರಿಗೆ ಅವರನ್ನು ನೋಡಲು ಆಗಲಿಲ್ಲ ಎಂದು ಬೆಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ನನ್ನ ಸ್ನೇಹಿತ ಬುಲೆಟ್ ಪ್ರಕಾಶ್ ಇನ್ನಿಲ್ಲ ಎಂದು ಕೇಳಿದಾಗ ಬೇಸರವಾಯಿತು. ಇನ್ನೂ ಹೆಚ್ಚು ದುಃಖಕರವಾದ ಸಂಗತಿಯೆಂದರೆ ಸಿನಿಮಾ ಉದ್ಯಮದ ಸ್ನೇಹಿತರು ಕೊನೆಯ ಬಾರಿಗೆ ಅವರನ್ನು ನೋಡಲು ಅವರ ಮನೆಗೆ ಭೇಟಿ ನೀಡಲು ಸಾಧ್ಯವಿಲ್ಲ. ಬಲೆಟ್ ಪ್ರಕಾಶ್ ಇದ್ದಲ್ಲಿ ನಗು ಇರುತ್ತಿತ್ತು. ಅವರೊಬ್ಬ ಅದ್ಭುತ ನಟ. ನನ್ನ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
44 ವರ್ಷದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಲಿವರ್, ಕಿಡ್ನಿ ವೈಫಲ್ಯದಿಂದಾಗಿ ಚಿಕಿತ್ಸೆ ಫಲಿಸದೆ ಸೋಮವಾರ ಮಧ್ಯಾಹ್ನ ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಮಾರು 325ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಬುಲೆಟ್ ಪ್ರಕಾಶ್, ಸ್ಯಾಂಡಲ್‍ವುಡ್ ಎಲ್ಲಾ ಸ್ಟಾರ್ ನಟರ ಜೊತೆಯಲ್ಲಿ ಕಾಣಿಸಿಕೊಂಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ ಕಾಂಬಿನೇಷನ್ ಭಾರೀ ಕಚಗುಳಿ ಇಡ್ತಿತ್ತು. ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಹೆಬ್ಬಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಬುಲೆಟ್ ಪ್ರಕಾಶ್ ಅವರ ನಿಧನದ ಬಳಿಕ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ರಂಗಾಯಣ ರಘು ಅವರು, ನಾನು ಹಾಗೂ ಬುಲೆಟ್ ಪ್ರಕಾಶ್ ಹೋಗೋ ಬಾರೋ ಫ್ರೆಂಡ್ಸ್. ಅವರಿಗೆ ನಾನಷ್ಟೇ ಅಲ್ಲ ದೊಡ್ಡ ಸಂಖ್ಯೆಯ ಸ್ನೇಹ ಬಳಗವೇ ಇದೆ. ಪ್ರಕಾಶ್ ಅವರ ಏರಿಯಾದಲ್ಲಿ ಅನೇಕ ಸ್ನೇಹಿತರಿದ್ದರು. ಎಲ್ಲರೊಂದಿಗೂ ಹಾಸ್ಯವಾಗಿ, ನಗು ಮುಖದಿಂದ ಇರುತ್ತಿದ್ದರು. ಎಲ್ಲವನ್ನೂ ತಮಾಷೆಯಾಗಿ ತೆಗೆದುಕೊಳ್ಳುತ್ತಿದ್ದ ಎಂದು ನೆನೆದಿದ್ದರು.
ಸಿನಿಮಾದಲ್ಲಿ ಹಾಸ್ಯನಟನಾಗಿ ಖ್ಯಾತಿ ಪಡೆದಿದ್ದ ಬುಲೆಟ್, ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಸ್ನೇಹಿಮುಖಿಯಾಗಿದ್ದ ಬುಲೆಟ್ ಪ್ರಕಾಶ್ ಅವರು ಅಷ್ಟೇ ನೇರನುಡಿ ಹೊಂದಿದ ವ್ಯಕ್ತಿಯಾಗಿದ್ದರು.