ಬೆಂಗಳೂರು: ನೇಮಕಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.17ರಿಂದ ಶೇ.15ಕ್ಕೆ ಸೀಮಿತಗೊಳಿಸಿ ಒಳಮೀಸಲಾತಿ ಜಾರಿಗೊಳಿಸಲಾಗಿದೆ.
ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಸ್‌ಸಿ 101 ಉಪಜಾತಿಗಳಿಗೆ ಸರ್ಕಾರ ಒಳಮೀಸಲಾತಿ ಹಂಚಿಕೆ ಮಾಡಿತ್ತು. ಈ ಕೂಡಲೇ 56,432 ಹುದ್ದೆಗಳಿಗೆ ನೇರ ನೇಮಕಾತಿ ಕೈಗೊಳ್ಳಲು ಕ್ರಮ ವಹಿಸುವಂತೆ ನೇಮಕಾತಿ ಪ್ರಾಧಿಕಾರ, ಇಲಾಖೆಗಳಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಈ ಹಿಂದೆ ಹೊರಡಿಸಿದ ನೇಮಕಾತಿ ಆದೇಶಗಳನ್ನು ಹಿಂಪಡೆದು ಹೊಸ ಅಧಿಸೂಚನೆಗಳನ್ನು ಹೊರಡಿಸಲು ಸರ್ಕಾರ ಸೂಚನೆ ನೀಡಿದೆ. ಎಸ್‌ಸಿ ವರ್ಗ 15% ರಷ್ಟು ಮೀಸಲಾತಿಯಡಿ ಎ,ಬಿ,ಸಿ ವರ್ಗಗಳಿಗೆ ಹಂಚಿರುವ 5.25%, 5.25% ಮತ್ತು 4.5% ಒಳಮೀಸಲಾತಿ ಅನ್ವಯ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಲು ಸೂಚಿಸಿದೆ.
ಹೈಕೋರ್ಟ್‌ನ ಮುಂದಿನ ಆದೇಶಕ್ಕೆ ಒಳಪಟ್ಟು ರಾಜ್ಯದಲ್ಲಿ ಒಳಮೀಸಲಾತಿ ಜಾರಿ
* ದಲಿತ ಎಡಗೈಗೆ(ಪ್ರವರ್ಗ ಎ) 5.25%, ದಲಿತ ಬಲಗೈಗೆ(ಪ್ರವರ್ಗ ಬಿ) 5.25%, ಹಾಗೂ ಅಲೆಮಾರಿ, ಅರೆ ಅಲೆಮಾರಿ, ಸ್ಪೃಶ್ಯ ಜಾತಿಗಳಿಗೆ(ಪ್ರವರ್ಗ ಸಿ) 4.5% ಪ್ರಮಾಣದಲ್ಲಿ ನೇಮಕಾತಿಗಳಲ್ಲಿ ಒಳಮೀಸಲಾತಿ ಕೊಡಬೇಕು.
* ಪ್ರವರ್ಗ-ಸಿಗೆ ಲಭ್ಯವಾಗುವ ಹುದ್ದೆಗಳಲ್ಲಿ 20% ರಷ್ಟು ಹುದ್ದೆಗಳನ್ನು 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಮೀಸಲಿರಿಸಬೇಕು.
* ಈ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಸೇರಿದವರು ಲಭ್ಯವಾಗದಿದ್ದಲ್ಲಿ, ಆ ಹುದ್ದೆಗಳನ್ನು ಪ್ರವರ್ಗ `ಸಿ’ಯ ಇತರೆ ಜಾತಿಗಳಿಗೆ ನೀಡಬೇಕು.
* ನೇಮಕಾತಿಗಳಲ್ಲಿ ಮೇಲಿನ ಮೀಸಲಾತಿ ಪ್ರಮಾಣವನ್ನು ಅನುಷ್ಠಾನಗೊಳಿಸಲು 400 ಬಿಂದುಗಳ ರೋಸ್ಟರ್ ಪದ್ಧತಿಯನ್ನು ಅನುಪಾಲಿಸಬೇಕು.
* ಯಾವುದೇ ವೃಂದದಲ್ಲಿ 3ಕ್ಕಿಂತ ಕಡಿಮೆ ಪರಿಶಿಷ್ಟ ಜಾತಿ ಬಿಂದುಗಳು ಲಭ್ಯವಾಗುತ್ತಿದ್ದಲ್ಲಿ, ಪರಿಶಿಷ್ಟ ಜಾತಿಗೆ ಮೀಸಲಾದ ಹುದ್ದೆಗಳನ್ನು ಪರಿಶಿಷ್ಟ ಜಾತಿ ಸಾಮಾನ್ಯ ಎಂದು ಪರಿಗಣಿಸಲಾಗುವುದು.
* ಮುಂದೆ ಹೈಕೋರ್ಟ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹೆಚ್ಚಿಸಿರುವ 24% ರಷ್ಟು ಮೀಸಲಾತಿ ಪ್ರಮಾಣವನ್ನು ಒಪ್ಪಿದಲ್ಲಿ 6% ರಷ್ಟು ಹುದ್ದೆಗಳನ್ನು ಬ್ಯಾಕ್‌ಲಾಗ್ ಹುದ್ದೆಗಳೆಂದು ಪರಿಗಣಿಸಲಾಗುತ್ತದೆ.
Laxmi News 24×7