Breaking News

ಜಮೀರ್‌ ಬಳಿ ಕ್ಷಮೆ ಕೇಳದೇ ಇದ್ರೆ ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಎಫೆಕ್ಟ್ ಆಗುತ್ತೆ: ಮಲ್ಲಿಕಾರ್ಜುನ್‌ಗೆ ಸಿರಾಜ್ ಅಹ್ಮದ್‌ ವಾರ್ನಿಂಗ್‌

Spread the love

ದಾವಣಗೆರೆ: ಜಮೀರ್ ಅಹ್ಮದ್‌ ಅವರ ಬಗ್ಗೆ ಏನಾದರೂ ಮಾತನಾಡಿದರೆ ಜನ ಸಹಿಸುವುದಿಲ್ಲ. ಕೂಡಲೇ ಜಮೀರ್‌ ಅವರ ಬಳಿ ಕ್ಷಮೆ ಕೋರುವಂತೆ ಕೆಪಿಸಿಸಿ ಅಲ್ಪಸಂಖ್ಯಾತ ರಾಜ್ಯ ಉಪಾಧ್ಯಕ್ಷ ಹಾಗೂ ಕೆಎಂಡಿಸಿ ನಿರ್ದೆಶಕ ಸಿರಾಜ್ ಅಹ್ಮದ್  ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ್‌ ಅವರಿಗೆ ಆಗ್ರಹಿಸಿದ್ದಾರೆ.

ಜಮೀರ್‌ ವಿರುದ್ಧ ಏಕವಚನದಲ್ಲಿ ಮಲ್ಲಿಕಾರ್ಜುನ್‌ ಮಾತನಾಡಿದ್ದಕ್ಕೆ ಬೂದಿಹಾಳ ರಸ್ತೆಯಲ್ಲಿನ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷಕ್ಕೆ ಮತದಾರರು ಮಾತ್ರ ದೊಡ್ಡವರು, ನೀವು ಅಲ್ಲ ಜಮೀರ್ ಅಲ್ಲ. ಜಮೀರ್ ಎರಡು ಜಿಲ್ಲೆಯ ಉಸ್ತುವಾರಿ ಹಾಗೂ ತಾರಾ ಪ್ರಚಾರಕರಾಗಿದ್ದಾರೆ. ಜಮೀರ್‌ ಬಳಿ ಕ್ಷಮೆ ಕೇಳದೇ ಇದ್ದರೆ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.

ಶಾಮನೂರು ಶಿವಶಂಕರಪ್ಪನವರ ಅವಧಿಯಿಂದ ನಾವು ಮನವಿ ಮಾಡುತ್ತಿದ್ದು, ಇಲ್ಲಿಯವರೆಗೂ ಅವರಿಗೆ ಬೆಂಬಲ ನೀಡುತ್ತಾ ಬಂದಿದ್ದೇವೆ. ಅವರ ಕಾಲವಾದ ನಂತರ ನಮಗೆ ಅವಕಾಶ ಕೇಳಿದ್ದೇವೆ. ಶಾಮನೂರು ನಮ್ಮ ಜೊತೆ ಚೆನ್ನಾಗಿದ್ದರು. ಆದರೆ ಎಸ್‌ಎಸ್‌ ಮಲ್ಲಿಕಾರ್ಜುನ್ ವರ್ತನೆ ಬೇರೆ ರೀತಿಯಲ್ಲಿ ಇದೆ. ಶಿವಶಂಕರಪ್ಪನವರ ಅವರ ಬುದ್ದಿ ಅವರ ಮಗನಲ್ಲಿ ಇಲ್ಲ ಎಂದು ದೂರಿದರು.

ಜಮೀರ್ ಅಲ್ಪಸಂಖ್ಯಾತರಲ್ಲದೇ ಎಲ್ಲಾ ಅಹಿಂದ ಸಮುದಾಯಗಳ ನಾಯಕರಾಗಿದ್ದಾರೆ. ರಾಜ್ಯದಲ್ಲಿ ಚುನಾವಣೆ ಗೆಲುವಿಗೆ ಜಮೀರ್ ಅಹ್ಮದ್ ಖಾನ್ ಶ್ರಮ ಸಾಕಷ್ಟಿದೆ. ಅಂತವರಿಗೆ ಮಲ್ಲಿಕಾರ್ಜುನ್ ಏಕವಚನದಲ್ಲಿ ಮಾತನಾಡಿದ್ದಾರೆ. ಅದಕ್ಕೆ ಜಮೀರ್ ಸೌಮ್ಯವಾಗಿ, ಸರಳವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜಮೀರ್ ಅಹ್ಮದ್ ಅವರಿಗೆ ಇವರಿಗಿಂತ ಜೋರಾಗಿ ಮಾತನಾಡಲು ಗೊತ್ತಿದೆ. ಅಲ್ಪಸಂಖ್ಯಾತರು ಟಿಕೆಟ್ ಕೇಳಿದ್ದಕ್ಕೆ ನಿಮಗೆ ಇಷ್ಟು ಕೋಪ ಯಾಕೆ ಎಂದು ಪ್ರಶ್ನಿಸಿದರು.

ನಿಮ್ಮ ಕುಟುಂಬದ ಗೆಲುವಿಗೆ ನಮ್ಮ ಸಮಾಜದ ಕೊಡುಗೆ ದೊಡ್ಡದು. ನಮ್ಮ ಋಣ ತೀರಿಸುವುದನ್ನು ಮರೆಯಬೇಡಿ. ಸಮಾಜದ ಮುಖಂಡರು ಹೇಳಿದ ಹಿನ್ನೆಲೆಯಲ್ಲಿ ಜಮೀರ್ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ. ಒಂದೇ ಪಕ್ಷದಲ್ಲಿದ್ದು ಈ ರೀತಿ ಮಾತನಾಡಿ ಇಡೀ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಸಿಟ್ಟು ಹೊರಹಾಕಿದರು.

ಎಲ್ಲಾ ಇವರೇ ಮಾಡಿಕೊಳ್ಳುವುದಾದರೆ ಕೆಪಿಸಿಸಿ, ಎಐಸಿಸಿ ಹಾಗೂ ಚುನಾವಣಾ ಸಮಿತಿಗೆ ಏನು ಕೆಲಸ? ಜಮೀರ್ ಹಠದಿಂದ ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ ಗೆದ್ದಿದೆ. ಹೈಕಮಾಂಡ್‌ ಹೇಳಿದ್ದು ಜಮೀರ್ ಬಳಿ. ನಿಮ್ಮ ಬಳಿ ಹೇಳಿಲ್ಲ. ನೀವು ಬೇಕಿದ್ದರೆ ಹೈಕಮಾಂಡ್ ಕೇಳಿ, ಟಿಕೆಟ್ ಕೊಟ್ಟರೆ ಮಾಡಿ. ಅದನ್ನು ಬಿಟ್ಟು ನಮ್ಮ ನಾಯಕರ ಬಗ್ಗೆ ಮಾತನಾಡಬೇಡಿ. ಜಮೀರ್ ಅವರಿಗೆ ಏನಾದರೂ ಮಾತನಾಡಿದರೆ ಜನ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ನಮ್ಮ ಕ್ಷೇತ್ರಕ್ಕೆ ಪ್ರಚಾರಕ್ಕೆ ಬಾರದೇ ಇದ್ದರೂ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸಿ ಕಳುಹಿಸಿದ್ದೇವೆ. ಮಲ್ಲಿಕಾರ್ಜುನ್‌ ಅವರು ತಮ್ಮ ಜೊತೆಯಲ್ಲಿ ಇದ್ದವರನ್ನು ಮಾತ್ರ ಪರಿಗಣನೆ ಮಾಡುತ್ತಾರೆ. ನಮ್ಮನ್ನು ಯಾವತ್ತೂ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಬೇಕಾದರೆ ಪರಿಷತ್ ಸದಸ್ಯ ಜಬ್ಬಾರ್ ಹಾಗೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅಭಿವೃದ್ಧಿಯನ್ನು ಪರಿಶೀಲಿಸಿ. ಸಚಿವರಿಗಿಂತ ಹೆಚ್ಚಿನ ಕೆಲಸ ಜಬ್ಬಾರ್ ಮಾಡಿದ್ದಾರೆ ಎಂದು ಹೇಳಿದರು.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ

Spread the loveದಾವಣಗೆರೆ, ಬಾಗಲಕೋಟೆ: ದಾವಣಗೆರೆ ದಕ್ಷಿಣ  ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ  ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು ಗುರುವಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ