ಬೆಂಗಳೂರು: ಲಾಕ್ ಡೌನ್ ಆಗಿ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಲಾದ ಬಳಿಕ ಆನ್ಲೈನ್ನಲ್ಲಿ ಪಾಠ ಮಾಡಲು ಅವಕಾಶ ಕೊಡಲಾಗಿದೆ. ಅದೇ ರೀತಿ ಹಲವು ಕಡೆ ಈಗಾಗಲೇ ಆನ್ಲೈನ್ನಲ್ಲೇ ತರಗತಿಗಳು ಪ್ರಾರಂಭವಾಗಿವೆ. ಕೆಲ ಶಿಕ್ಷಣ ಸಂಸ್ಥೆಗಳಂತೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರ ಮೇಲೆ ವಿಪರೀತ ಒತ್ತಡ ಹೇರುತ್ತಿವೆ. ದಿನವಿಡೀ ಆನ್ಲೈನ್ ಕ್ಲಾಸ್ ಎಂದು ಹೈರಾಣಗೊಳಿಸುತ್ತಿವೆ ಎಂಬ ಆರೋಪ ಸಾಕಷ್ಟು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಧ್ಯ ಪ್ರವೇಶಿಸಿದ್ದು, ಆನ್ಲೈನ್ ಶಿಕ್ಷಣದ ಹೆಸರಲ್ಲಿ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೂ ಆನ್ಲೈನ್ ತರಗತಿ ಕೊಡಲಾಗುತ್ತಿದೆ. ಆದರೆ, ಖಾಸಗಿ ಶಾಲೆಗಳು ವೈಜ್ಞಾನಿಕ ಆಧಾರವಿಲ್ಲದೆ ಮಕ್ಕಳ ಅನವಶ್ಯಕ ಶೋಷಣೆಗೆ ಮುಂದಾಗಬಾರದು. ಆನ್ಲೈನ್ನಲ್ಲಿ ತರಗತಿ ನಡೆಸುವ ಮುನ್ನ ಮಕ್ಕಳ ಗಮನ ಅವಧಿ(Attention Span) ಹಾಗೂ ಅಡ್ಡಪರಿಣಾಮಗಳನ್ನ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಶಿಕ್ಷಣ ಸಚಿವರು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತಾಕೀತು ಮಾಡಿದ್ದಾರೆ.
ಅನಗತ್ಯವಿದ್ದರೂ ದಿನವಿಡೀ ಆನ್ಲೈನ್ ತರಗತಿ ನೀಡುತ್ತಿರುವ ಕ್ರಮಗಳಿಗೆ ಕಡಿವಾಣ ಹಾಕಲು ಕೂಡಲೇ ಸುತ್ತೋಲೆ ಹೊರಡಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಚಿವರು ಸೂಚಿಸಿದ್ಧಾರೆ.