Breaking News
Home / ಜಿಲ್ಲೆ / ಬೆಂಗಳೂರು / ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಕೊರೊನಾ ಇಲ್ಲ- ಸುರೇಶ್ ಕುಮಾರ್ ಸ್ಪಷ್ಟನೆ

ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಕೊರೊನಾ ಇಲ್ಲ- ಸುರೇಶ್ ಕುಮಾರ್ ಸ್ಪಷ್ಟನೆ

Spread the love

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಕೊರೊನಾ ಬಂದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ವಿದ್ಯಾರ್ಥಿನಿಯೊಬ್ಬಳು ಕ್ವಾರಂಟೈನ್ ಮೊಹರು ಅಳಿಸಿ ಪರೀಕ್ಷೆಗೆ ಹಾಜರಾಗಿದ್ದಾಳೆಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇದು ಸತ್ಯಕ್ಕೆ ದೂರವಾಗಿದೆ. ಈಗಾಗಲೇ ವಿದ್ಯಾರ್ಥಿನಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ. ಹಾಗಾಗಿ ಆಕೆ ಪರೀಕ್ಷೆ ಬರೆದ ಕೊಠಡಿಯಲ್ಲಿ ಹಾಜರಿದ್ದ ಯಾವುದೇ ಪರೀಕ್ಷಾರ್ಥಿಗಳು ಭಯಪಡಬೇಕಾದ ಅಗತ್ಯವಿಲ್ಲ. ಯಾವುದೇ ವಿದ್ಯಾರ್ಥಿ ಕ್ವಾರಂಟೈನ್‍ಗೆ ಒಳಗಾಗಬೇಕಾದ ಅಗತ್ಯವೂ ಇಲ್ಲ ಎಂದು ತಿಳಿಸಿದರು.

ವಿದ್ಯಾರ್ಥಿನಿಯೂ ಸಹ ಆರೋಗ್ಯದ ದೃಷ್ಟಿಯಿಂದ ಸುರಕ್ಷಿತವಾಗಿದ್ದಾಳೆ. ಆಕೆಯ ತಂದೆ ಈಗಾಗಲೇ ಕ್ವಾರಂಟೈನ್‍ನಲ್ಲಿದ್ದು, ಆರೋಗ್ಯ ಇಲಾಖೆಯ ನಿಗಾದಲ್ಲಿ ಸೂಕ್ತ ಚಿಕಿತ್ಸೆಗೊಳಗಾಗಿದ್ದಾರೆ. ಅವರೂ ಸಹ ಯಾವುದೇ ವಿಶೇಷ ಆರೋಗ್ಯದ ತೊಂದರೆಗೆ ಒಳಗಾಗಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಮಾಹಿರಿ ನೀಡಿದರು.

ಇಡೀ ರಾಜ್ಯದಲ್ಲಿ ಪರೀಕ್ಷೆ ಬರೆದ 6 ಲಕ್ಷ ವಿದ್ಯಾರ್ಥಿಗಳ ಹಿತವನ್ನು ಕಾಯ್ದ ಶಿಕ್ಷಣ ಇಲಾಖೆಗೆ ಈ ವಿದ್ಯಾರ್ಥಿನಿಯೋರ್ವಳನ್ನು ಪರೀಕ್ಷಿಸದೇ ಬೇರೊಬ್ಬರಿಗೆ ತೊಂದರೆಯನ್ನುಂಟು ಮಾಡುವಂತಹ ಯಾವುದೇ ಉದ್ದೇಶವಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯೂ ನಮ್ಮ ಶಿಕ್ಷಣ ಇಲಾಖೆಯ ಆಸ್ತಿಯಾಗಿದ್ದು, ಅವರ ಹಿತವೇ ನಮ್ಮ ಪ್ರಮುಖ ಆದ್ಯತೆಯಾಗಿದೆ. ಜೂನ್ 18ರಂದು ಇಂಗ್ಲಿಷ್ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಸುಮಾರು ಆರು ಲಕ್ಷ ವಿದ್ಯಾರ್ಥಿಗಳು ಅತ್ಯಂತ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆದಿದ್ದಾರೆ. ಶಿಕ್ಷಣ ಇಲಾಖೆಯೊಂದಿಗೆ ಆರೋಗ್ಯ, ಸಾರಿಗೆ, ಗೃಹ ಇಲಾಖೆಗಳು ಸೇರಿದಂತೆ ರಾಜ್ಯದಲ್ಲಿ ಆಯಾ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆದಿವೆ ಎಂದು ಹೇಳಿದರು.

ಎಲ್ಲಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳ ಹಿತರಕ್ಷಣೆಯೇ ನಮ್ಮ ಮೊದಲ ಆದ್ಯತೆಯಾದ್ದರಿಂದ ಮಕ್ಕಳ ಸುರಕ್ಷತೆ ಹೆಚ್ಚು ಒತ್ತು ನೀಡಲಾಗಿದೆ. ಈ ಸಂಬಂಧ ಮಕ್ಕಳನ್ನು ಮನೆಯಿಂದ ಪರೀಕ್ಷಾ ಕೇಂದ್ರ ಹಾಗೆಯೇ ಪರೀಕ್ಷಾ ಕೇಂದ್ರದಿಂದ ಮನೆಯವರೆಗೂ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಕರೆತರಲಾಗಿತ್ತು ಎಂದು ಸಚಿವರು ವಿವರಿಸಿದರು.

ರಾಜ್ಯದ 1016 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿವೆ. ಜಿಲ್ಲಾ ಕೇಂದ್ರದ 430, ತಾಲೂಕು ಕೇಂದ್ರಗಳಲ್ಲಿನ 328 ಮತ್ತು ಹೋಬಳಿ ಕೇಂದ್ರಗಳ 258 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿತ್ತು. ಈ ಪರೀಕ್ಷಾ ಕೇಂದ್ರಗಳಲ್ಲಿ 23,064 ಕೊಠಡಿಗಳನ್ನು ಮುಂಚೆ ಪರೀಕ್ಷೆಯನ್ನು ನಿರ್ವಹಿಸಲು ಗುರುತಿಸಿಕೊಳ್ಳಲಾಗಿತ್ತು. ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಹೆಚ್ಚುವರಿಯಾಗಿ 13,528 ಕೊಠಡಿಗಳನ್ನು ಸೇರ್ಪಡೆ ಮಾಡಿ 36,592 ಕೊಠಡಿಗಳನ್ನು ಬಳಸಿಕೊಂಡು ಪರೀಕ್ಷೆಗಳನ್ನು ನಿರ್ವಹಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಉಷ್ಣಾಂಶ ಪರೀಕ್ಷೆಯನ್ನು ನಡೆಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿದೆ. ಇಡೀ ರಾಜ್ಯದಲ್ಲಿ ಪರೀಕ್ಷಾ ಸಂದರ್ಭದಂದು ಜ್ವರ, ನೆಗಡಿಯಂತಹ ಅನಾರೋಗ್ಯಕ್ಕೆ ಒಳಗಾದ 20 ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿತ್ತು. ಅದೇ ರೀತಿ ರಾಜ್ಯಾದ್ಯಂತ ಒಟ್ಟು 223 ವಿದ್ಯಾರ್ಥಿಗಳು ಕಂಟೈನ್‍ಮೆಂಟ್ ವಲಯಗಳಿಂದ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಸ್ಪಷ್ಟ ನಿರ್ದೇಶನಗಳನ್ನು ಪರೀಕ್ಷಾ ಪೂರ್ವದಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರುಗಳಿಗೆ ನೀಡಲಾಗಿದ್ದು, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಕ್ಕೆ ಪ್ರವೇಶಿಸಲು ಅನುಮತಿ ನೀಡಿರುವುದನ್ನು ಮಾಧ್ಯಮಗಳ ಮೂಲಕ ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಈಗಾಗಲೇ ಸೂಚನೆ ನೀಡಿದ್ದೇನೆ. ಅದೇ ರೀತಿ ಇಂಗ್ಲೀಷ್ ಭಾಷಾ ಪರೀಕ್ಷೆಯ ದಿನದಂದು ಕಂಡುಬಂದ ನ್ಯೂನತೆಗಳನ್ನು ಅವಕಾಶಗಳನ್ನಾಗಿ ಬಳಸಿಕೊಂದು ಜೂನ್ 25ರಿಂದ ಆರಂಭವಾಗಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳಲ್ಲಿ ಈ ರೀತಿಯ ಯಾವುದೇ ಸಮಸ್ಯೆಗಳು ಎದುರಾಗದ ರೀತಿಯಲ್ಲಿ ಎಲ್ಲ ಕ್ರಮಗಳನ್ನೂ ಅನುಸರಿಸಲು ಈಗಾಗಲೇ ಇಲಾಖಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.


Spread the love

About Laxminews 24x7

Check Also

ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಸರಕಾರದ ಹಂತಕ್ಕೆ

Spread the love ಬೆಂಗಳೂರು: ಲೈಂಗಿಕ ಹಗರಣದಲ್ಲಿ ಸಿಲುಕಿರುವ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶರಣರು ಜೈಲು ಸೇರಿರುವ ಹಿನ್ನೆಲೆಯಲ್ಲಿ ಮಠಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ