ಬೆಂಗಳೂರು: ದೇಶದ ಪ್ರಮುಖ ನಗರಗಳಲ್ಲಿ ಕೊರೋನಾ ಅಟ್ಟಹಾಸದ ನಡುವೆ ಸೋಮವಾರದಿಂದ ದೇಶದಲ್ಲಿ ದೇಶಿಯ ವಿಮಾನಗಳ ಹಾರಾಟ ಆರಂಭ ಆಗುತ್ತಿದೆ. ಸರಿಸುಮಾರು 2 ತಿಂಗಳ ಬಳಿಕ ವಿಮಾನಗಳು ಗರಿಬಿಚ್ಚಿ ಹಾರಲಿವೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇ 25ರಿಂದ ಜೂನ್ 30ರವರೆಗೂ ವಿಮಾನಗಳ ಹಾರಾಟಕ್ಕೆ ಮೊದಲ ಹಂತದ ಅನುಮತಿ ನೀಡಲಾಗಿದೆ. ನಾಳೆಯಿಂದ ನಿತ್ಯವೂ 215 ವಿಮಾನಗಳ ಟೇಕ್ ಆಫ್, ಲ್ಯಾಂಡಿಂಗ್ ನಡೆಯಲಿದೆ. ಪ್ರತಿ 10 ನಿಮಿಷಕ್ಕೆ ಒಂದರಂತೆ ವಿಮಾನಗಳು ಟೆಕ್‍ಆಫ್ ಆಗಲಿವೆ. ಇಂಡಿಗೊ ಏರ್‌ಲೈನ್ಸ್ ಶೇ.47ರಷ್ಟು, ಏರ್‌ಏಷ್ಯಾ ಶೇ.16ರಷ್ಟು ಮತ್ತು ಸ್ಪೈಸ್ ಜೆಟ್ ಶೇ.14ರಷ್ಟು ವಿಮಾನಗಳ ಸೇವೆ ಇರಲಿದೆ. ಬೆಳಗಾವಿ ವಿಮಾನ ನಿಲ್ದಾಣದಿಂದ ನಾಳೆ 13 ವಿಮಾನಗಳು ಹೊರಡಲಿವೆ.
ಪ್ರಯಾಣಿಕರ ಆರೋಗ್ಯ ದೃಷ್ಟಿಯಿಂದ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕೊರೊನಾ ಸೋಂಕು ಹೆಚ್ಚಿರುವ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ದೆಹಲಿ ಮತ್ತು ರಾಜಸ್ಥಾನದಿಂದ ಬರುವವರಿಗೆ ಏಳು ದಿನ ಕಡ್ಡಾಯ ಸಾಂಸ್ಥಿಕ ಕ್ವಾರಂಟೇನ್‍ಗೆ ಒಳಪಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಉಳಿದ ರಾಜ್ಯಗಳಿಂದ ಬರುವವರು 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕಾಗುತ್ತದೆ.
ಬ್ಯುಸಿನೆಸ್ ಉದ್ದೇಶಕ್ಕೆ ಬರುವವರು ಕೊರೋನಾ ನೆಗೆಟಿವ್ ರಿಪೋರ್ಟ್ ಸಲ್ಲಿಸಿದರೆ ಮಾತ್ರ ರಾಜ್ಯಕ್ಕೆ ಪ್ರವೇಶ ನೀಡಲಾಗುತ್ತದೆ. ರಾಜ್ಯಕ್ಕೆ ಬರುವವರು ಸೇವಾಸಿಂಧು ಪೋರ್ಟಲ್ ಮೂಲಕ ಪಡೆದಿರುವ ಇ-ಪಾಸ್ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ಸೋಂಕು ಹೆಚ್ಚಿರುವ ಮಹಾರಾಷ್ಟ್ರದಲ್ಲಿ ವಿಮಾನ ಹಾರಾಟಕ್ಕೆ ಇನ್ನೂ ಸಮಯ ಬೇಕಿದೆ ಎಂದು ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ. ಅಷ್ಟೇ ಅಲ್ಲದೆ ಮಹಾರಾಷ್ಟ್ರದಲ್ಲಿ ಮೇ 31ಕ್ಕೆ ಲಾಕ್‍ಡೌನ್ ಅಂತ್ಯ ಆಗುತ್ತೆ ಅಂತಾ ಹೇಳೋಕೆ ಆಗಲ್ಲ ಎಂದಿದ್ದಾರೆ. ಈ ಮೂಲಕ ಮತ್ತೆ ಲಾಕ್‍ಡೌನ್ ವಿಸ್ತರಣೆಯ ಸುಳಿವು ನೀಡಿದ್ದಾರೆ.